ADVERTISEMENT

‘ಕೆಂಪು ದೀಪ’ದಿಂದ ಹೆಚ್ಚಲಿದೆ ಸೋಂಕು!

ಲೈಂಗಿಕ ಚಟುವಟಿಕೆ ತಾಣಗಳ ಮೇಲಿನ ನಿರ್ಬಂಧದಿಂದ ಕೋವಿಡ್‌–19 ಪ್ರಕರಣಗಳಿಗೆ ಬೀಳಲಿದೆ ತಡೆ

ಪಿಟಿಐ
Published 16 ಮೇ 2020, 19:58 IST
Last Updated 16 ಮೇ 2020, 19:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್: ಕೋವಿಡ್‌–19 ಕಾಯಿಲೆಗೆ ಲಸಿಕೆ ಕಂಡುಹಿಡಿಯುವ ತನಕ ಭಾರತದ ‘ಕೆಂಪು ದೀಪ’ ಪ್ರದೇಶಗಳನ್ನು ಮುಚ್ಚಿದರೆ, ಅಂದಾಜು ಮಾಡಿದ ಹೊಸ ಪ್ರಕರಣಗಳ ಪೈಕಿ ಶೇ 72ರಷ್ಟನ್ನು ತಡೆಗಟ್ಟಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಕೆಂಪು ದೀಪ’ ಪ್ರದೇಶಗಳ ಚಟುವಟಿಕೆಗಳು ಸ್ಥಗಿತಗೊಂಡರೆ ದೇಶದಲ್ಲಿ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟುವುದು ಕೂಡ ಸದ್ಯದ ಲೆಕ್ಕಾಚಾರಕ್ಕಿಂತ 17 ದಿನಗಳಷ್ಟು ವಿಳಂಬವಾಗಲಿದೆ’ ಎಂದೂ ಅವರು ಹೇಳಿದ್ದಾರೆ.

ಅಮೆರಿಕದ ಯಾಲೆ ವೈದ್ಯಕೀಯ ಕಾಲೇಜಿನ ಸಂಶೋಧಕರನ್ನು ಒಳಗೊಂಡ ತಂಡ ನಡೆಸಿದ ಅಧ್ಯಯನದಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ. ಲಾಕ್‌ಡೌನ್‌ ತೆರವುಗೊಳಿಸಿದ ನಂತರದ ಅವಧಿಯಲ್ಲೂ ಇಂತಹ ಲೈಂಗಿಕ ಚಟುವಟಿಕೆ ತಾಣಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದರೆ ಕೋವಿಡ್‌–19ರ ಭವಿಷ್ಯದ ಸಾವಿನ ಪ್ರಮಾಣವು ಶೇ 63ರಷ್ಟು ತಗ್ಗಲಿದೆ ಎಂದು ವಿಶ್ಲೇಷಿಸಿದ್ದಾರೆ.

ADVERTISEMENT

ವರದಿಯನ್ನು ಭಾರತ ಸರ್ಕಾರ ಮಾತ್ರವಲ್ಲದೆ ಸಂಬಂಧಿತ ರಾಜ್ಯ ಸರ್ಕಾರಗಳ ಜತೆಗೂ ಹಂಚಿಕೊಳ್ಳಲಾಗಿದೆ. ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕವೂ ‘ಕೆಂಪು ದೀಪ’ ಪ್ರದೇಶದ ಮೇಲಿನ ನಿರ್ಬಂಧವನ್ನು ಮುಂದುವರಿಸಲು ಶಿಫಾರಸು ಮಾಡಲಾಗಿದೆ.ದೇಶದಲ್ಲಿ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟುವುದು ವಿಳಂಬವಾದಷ್ಟೂ ಸರ್ಕಾರಕ್ಕೆ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಲು ಹಾಗೂ ಯೋಜಿತ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಕಾಲಾವಕಾಶ ಸಿಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ (ನ್ಯಾಕೊ) ದಾಖಲೆಗಳ ಪ್ರಕಾರ, ದೇಶದಲ್ಲಿ 6,37,500 ಲೈಂಗಿಕ ಕಾರ್ಯಕರ್ತರಿದ್ದು, ಪ್ರತಿದಿನ ಐದು ಲಕ್ಷ ಗ್ರಾಹಕರು ‘ಕೆಂಪು ದೀಪ’ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಒಂದುವೇಳೆ ಈ ಪ್ರದೇಶದ ಚಟುವಟಿಕೆಗಳ ಪುನರಾರಂಭಕ್ಕೆ ಅವಕಾಶ ನೀಡಿದರೆ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಾಗಿದೆ. ಲೈಂಗಿಕ ಕ್ರಿಯೆಯಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿರುವ ಕಾರಣ ಸೋಂಕು ಕ್ಷಿಪ್ರವಾಗಿ ಹರಡಲಿದೆ. ಅದರಿಂದ ಸಮುದಾಯಕ್ಕೂ ಕ್ಷಿಪ್ರವಾಗಿ ಹರಡುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

‘ಭಾರತದಲ್ಲಿ ‘ಕೆಂಪು ದೀಪ’ ಪ್ರದೇಶದ ಮೇಲಿನ ಚಟುವಟಿಕೆಗಳ ಮೇಲೆ ನಿಯಂತ್ರಣ ವಿಧಿಸಿದಷ್ಟೂ ಸೋಂಕು ಹರಡುವ ಭೀತಿ ದೂರವಾಗಲಿದೆ’ ಎಂದು ಹೇಳುತ್ತಾರೆ ಯಾಲೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಜೆಫೆರಿ ಟೌನ್ಸೆಂಡ್‌.

ಆಸ್ಟ್ರೇಲಿಯಾದಲ್ಲಿ ವೇಶ್ಯಾಗೃಹಗಳನ್ನು ಅನಿರ್ದಿಷ್ಟಾವಧಿಗೆ ಬಂದ್‌ ಮಾಡಿ ಆದೇಶ ಹೊರಡಿಸಲಾಗಿದೆ. ಜರ್ಮನಿ, ನೆದರ್ಲೆಂಡ್ಸ್‌ನಲ್ಲೂ ವೇಶ್ಯಾಗೃಹಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಸರ್ಕಾರಗಳು ಹೇಳಿವೆ.

ಜಪಾನ್‌ನಲ್ಲಿ ‘ಕೆಂಪು ದೀಪ’ ಪ್ರದೇಶದ ಚಟುವಟಿಕೆಗಳ ಮೇಲೆ ನಿಯಂತ್ರಣ ವಿಧಿಸಲಿಲ್ಲ. ಹೀಗಾಗಿ ಅಂತಹ ಪ್ರದೇಶಗಳಿರುವ ನಗರಗಳಲ್ಲಿ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದ್ದವು ಎಂದು ಸಂಶೋಧಕರು ವಿವರಿಸಿದ್ದಾರೆ.

ಅಪಾಯದಲ್ಲಿ ಐದು ನಗರಗಳು

ಭಾರತದ ‘ಕೆಂಪು ದೀಪ’ ಪ್ರದೇಶಗಳಿರುವ ಐದು ನಗರಗಳು ಕೆಂಪು ವಲಯದಲ್ಲಿ ಇರುವುದನ್ನು ಉದಾಹರಿಸಿರುವ ಸಂಶೋಧಕರು, ಆ ನಗರಗಳಲ್ಲಿ ಸೋಂಕು ಕ್ಷಿಪ್ರವಾಗಿ ಹರಡಲು ಈ ಪ್ರದೇಶಗಳ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲೈಂಗಿಕ ಚಟುವಟಿಕೆಗಳ ತಾಣದ ಮೇಲಿನ ನಿರ್ಬಂಧ ಮುಂದುವರಿದರೆ ಸೋಂಕಿನ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟಲು ಮುಂಬೈನಲ್ಲಿ 12 ದಿನ, ನವದೆಹಲಿಯಲ್ಲಿ 17 ದಿನ, ಪುಣೆಯಲ್ಲಿ 29 ದಿನ, ನಾಗ್ಪುರದಲ್ಲಿ 30 ದಿನ ಹಾಗೂ ಕೋಲ್ಕತ್ತದಲ್ಲಿ 36 ದಿನಗಳಷ್ಟು ವಿಳಂಬವಾಗಲಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.