ADVERTISEMENT

ಅಭಿವೃದ್ಧಿಗಾಗಿ ಸುಧಾರಣೆ ಕ್ರಮಗಳು ಅಗತ್ಯ: ಪ್ರಧಾನಿ ಮೋದಿ

ಪಿಟಿಐ
Published 7 ಡಿಸೆಂಬರ್ 2020, 8:52 IST
Last Updated 7 ಡಿಸೆಂಬರ್ 2020, 8:52 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಲಖನೌ: ‘ಅಭಿವೃದ್ಧಿಗಾಗಿ ಸುಧಾರಣೆ ಕ್ರಮಗಳು ಅಗತ್ಯವಾಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ಸೋಮವಾರ ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಆಗ್ರಾ ಮೆಟ್ರೊ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಎಲ್ಲ ಕ್ಷೇತ್ರಗಳ ಸಮಗ್ರ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ. ಕೆಲವು ಕಾನೂನುಗಳು ಹಿಂದಿನ ಶತಮಾನದಲ್ಲಿ ಉತ್ತಮವಾಗಿದ್ದವು. ಆದರೆ, ಈಗ ಅಂತಹ ಕಾನೂನುಗಳು ಅಪ್ರಸ್ತುತವಾಗಿವೆ’ ಎಂದು ಹೇಳಿದರು.

‘ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸುಧಾರಣೆ ಕ್ರಮಗಳು ಭಾಗಶಃ ಅಥವಾ ಅವ್ಯವಸ್ಥೆಯಿಂದ ಕೂಡಿರುತ್ತಿದ್ದವು. ಈಗ ಸುಧಾರಣೆ ಕ್ರಮಗಳ ಜನರ ಜೀವನಮಟ್ಟ ಸುಧಾರಿಸುತ್ತಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರ ಬದುಕು ಸರಳ ಮತ್ತು ಸುಂದರವಾಗಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ಹೇಳಿದರು.

ADVERTISEMENT

ಹೊಸ ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈ ಹೇಳಿಕೆ ನೀಡಿದ್ದಾರೆ.

‘ಹೂಡಿಕೆಯನ್ನು ಹೆಚ್ಚಿಸಬೇಕು ಮತ್ತು ಆಧುನಿಕ ತಂತ್ರಜ್ಞಾನದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬೇಕು’ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

₹8,379.62 ಕೋಟಿ ವೆಚ್ಚದ ಆಗ್ರಾ ಮೆಟ್ರೊ ಯೋಜನೆ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದ್ದು, ಒಟ್ಟು 29.4 ಕಿಲೋ ಮೀಟರ್‌ ಉದ್ದ ರೈಲು ಮಾರ್ಗಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.