ADVERTISEMENT

ರೈತರ ಬಿಡುಗಡೆ | ನಿರಂಕುಶ ಅಧಿಕಾರದ ವಿರುದ್ಧ ಪ್ರಜಾಪ್ರಭುತ್ವದ ಜಯ: SKM

ಪಿಟಿಐ
Published 5 ಡಿಸೆಂಬರ್ 2024, 10:04 IST
Last Updated 5 ಡಿಸೆಂಬರ್ 2024, 10:04 IST
   

ಅಲಿಗಢ(ಉತ್ತರ ಪ್ರದೇಶ): ರಾಕೇಶ್‌ ಟಿಕಾಯತ್ ಸೇರಿದಂತೆ ರೈತ ಮುಖಂಡರ ಬಿಡುಗಡೆಯು ನಿರಂಕುಶ ಅಧಿಕಾರದ ವಿರುದ್ಧ ಪ್ರಜಾಪ್ರಭುತ್ವದ ವಿಜಯವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಹೇಳಿದೆ.

ರೈತರ ಮುಖಂಡರ ಸಭೆಯಲ್ಲಿ ಭಾಗಿಯಾಗಲು ಗ್ರೇಟರ್ ನೋಯಿಡಾಗೆ ತೆರಳುತ್ತಿದ್ದ ಭಾರತೀಯ ಕಿಸಾನ್‌ ಯೂನಿಯನ್‌ನ(ಬಿಕೆಯು) ಮುಖಂಡ ರಾಕೇಶ್‌ ಟಿಕಾಟಿಯ್‌ ಮತ್ತು ಅವರ ಬೆಂಬಲಿಗರನ್ನು ಬುಧವಾರ ಅಲಿಗಢ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದರು.

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಕೆಎಂ, ’ರೈತರ ಸಭೆಯಲ್ಲಿ ಭಾಗವಹಿಸದಂತೆ ಟಿಕಾಯತ್ ಅವರನ್ನು ತಡೆಯುವ ಮೂಲಕ ಅವರ ಮೂಲಭೂತ ಹಕ್ಕನ್ನು ನಿರಾಕರಿಸಲಾಗಿದೆ’ ಎಂದು ತಿಳಿಸಿದೆ.

ADVERTISEMENT

‘ರೈತ ಚಳವಳಿಯ ಒಗ್ಗಟ್ಟನ್ನು ಕಂಡು ಯೋಗಿ ಆದಿತ್ಯನಾಥ್ ಸರ್ಕಾರವು ಟಿಕಾಯತ್, ರೂಪೇಶ್‌ ವರ್ಮಾ, ಸುಖಬೀರ್ ಖಲೀಫಾ ಮತ್ತು ಸುನಿಲ್ ಫೌಜಿ ಅವರನ್ನು ಬಿಡುಗಡೆ ಮಾಡಿದೆ’ ಎಂದಿದೆ.

ರಾಜ್ಯ ಸರ್ಕಾರ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರೈತ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಸೋಮವಾರ ‘ದೆಹಲಿ ಚಲೋ’ ಚಳವಳಿ ಆರಂಭಿಸಿದ್ದವು. ಆದರೆ, ಪ್ರತಿಭಟನೆಗೆ ಪೊಲೀಸರು ಅಡ್ಡಿಪಡಿಸಿದ್ದರಿಂದ ಆಕ್ರೋಶಿತರಾದ ರೈತರು ನೊಯಿಡಾದ 'ದಲಿತ ಪ್ರೇರಣಾ ಸ್ಥಳ'ದಲ್ಲಿ ಧರಣಿ ಕುಳಿತರು.

ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 160ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಬುಧವಾರ ರೈತ ಮುಖಂಡರನ್ನು ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸರ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬುಧವಾರ ಸಂಜೆ ರೈತ ಮುಖಂಡರನ್ನು ಬಿಡುಗಡೆಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.