ADVERTISEMENT

ಎಸ್‌–400 ಪಾಲುದಾರಿಕೆಗೆ ಯತ್ನಿಸಿದ್ದ ರಿಲಯನ್ಸ್

ಇಂಡಿಯಾ ಟುಡೇ ವರದಿಯಲ್ಲಿ ಉಲ್ಲೇಖ

ಏಜೆನ್ಸೀಸ್
Published 7 ಅಕ್ಟೋಬರ್ 2018, 20:00 IST
Last Updated 7 ಅಕ್ಟೋಬರ್ 2018, 20:00 IST
ಎಸ್‌–400
ಎಸ್‌–400   

ನವದೆಹಲಿ:ಎಸ್‌–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದದಲ್ಲೂ ಭಾರತೀಯ ಪಾಲುದಾರಿಕೆಯನ್ನು ಪಡೆದುಕೊಳ್ಳಲು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್‌ ಮುಂದಾಗಿತ್ತು ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.

‘ಆದರೆ ರಷ್ಯಾವು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಭಾರತೀಯ ಪಾಲುದಾರಿಕೆಯನ್ನು ರದ್ದುಪಡಿಸಲಾಗಿದೆ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘2015ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಗೆ ಭೇಟಿ ನೀಡಿದ್ದರು. ಮಾಸ್ಕೊದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ನಡೆದ ಮಾತುಕತೆ ವೇಳೆ ಎಸ್‌–400 ಕ್ಷಿಪಣಿ ವ್ಯವಸ್ಥೆ ಖರೀದಿ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆಗ ಅನಿಲ್ ಅಂಬಾನಿ ಸಹ ಮಾಸ್ಕೊದಲ್ಲಿ ಇದ್ದರು. ಎಸ್‌–400 ಕ್ಷಿಪಣಿ ವ್ಯವಸ್ಥೆ ತಯಾರಿಸುವ ‘ಅಲ್ಮಾಜ್‌ಆಂಟೇ’ ಕಂಪನಿಯ ಜತೆ ಪಾಲುದಾರಿಕೆಗೆ ಒಪ್ಪಂದ ಮಾಡಿಕೊಂಡಿದ್ದರು’ ಎಂದು ಇಂಡಿಯಾ ಟುಡೆ ಹೇಳಿದೆ.

ADVERTISEMENT

‘ಈ ಸಂಬಂಧ ರಿಲಯನ್ಸ್ ಡಿಫೆನ್ಸ್ 2015ರ ಡಿಸೆಂಬರ್ 24ರಂದು ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿತ್ತು’ ಎಂದು ವರದಿಯಲ್ಲಿ ಹೇಳಿದೆ. ಜತೆಗೆ ಪತ್ರಿಕಾ ಪ್ರಕಟಣೆಯ ಚಿತ್ರವನ್ನೂ ಪ್ರಕಟಿಸಿದೆ.

ಆದರೆ ಎಸ್‌–400 ಕ್ಷಿಪಣಿ ಒಪ್ಪಂದದಲ್ಲಿ ಭಾರತದ ಯಾವುದೇ ಕಂಪನಿಯ ಜತೆಗೂ ಪಾಲುದಾರಿಕರಗೆ ರಷ್ಯಾ ಸರ್ಕಾರ ನಿರಾಕರಿಸಿತ್ತು. ‘ಈ ಕ್ಷಿಪಣಿ ವ್ಯವಸ್ಥೆಯು ಅತ್ಯಂತ ಸೂಕ್ಷ್ಮ ಉಪಕರಣಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ವಿದೇಶಿ ಕಂಪನಿ ಜತೆಗೆ ಪಾಲುದಾರಿಕೆ ಮಾಡಿಕೊಂಡರೆ ಈ ವ್ಯವಸ್ಥೆಯನ್ನು ಕಾಲಮಿತಿಯೊಳಗೆ ಪೂರೈಸುವುದು ಕಷ್ಟವಾಗುತ್ತದೆ’ ಎಂಬುದು ರಷ್ಯಾ ನೀಡಿದ ಕಾರಣವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಾಲುದಾರಿಕೆಯೇ ರದ್ದು

ಈ ಒಪ್ಪಂದದಲ್ಲಿ ಭಾರತೀಯ ಕಂಪನಿಯ ಪಾಲುದಾರಿಕೆಯನ್ನು ಇದೇ ಜುಲೈನಲ್ಲಿ ಕೇಂದ್ರ ಸರ್ಕಾರವೇ ರದ್ದುಪಡಸಿತ್ತು.

ಇದೇ ಅಕ್ಟೋಬರ್‌ 5ರಂದು ಮಾಡಿಕೊಳ್ಳಲಾದ ಅಂತಿಮ ಒಪ್ಪಂದದಲ್ಲಿ ‘ಕ್ಷಿಪಣಿ ವ್ಯವಸ್ಥೆಯ ಐದೂ ಘಟಕಗಳನ್ನು ಸಂಪೂರ್ಣ ಸನ್ನಧು ಸ್ಥಿತಿಯಲ್ಲಿ ರಷ್ಯಾವೇ ಪೂರೈಸಲಿದೆ’ ಎಂದು ಸ್ಪಷ್ಟಪಡಿಸಲಾಗಿದೆ.

ರಿಲಯನ್ಸ್ ಪ್ರಕಟಣೆಯಲ್ಲೇನಿತ್ತು...

‘ಸುಮಾರು ₹ 40,000 ಕೋಟಿ ಮೊತ್ತದ ಎಸ್‌–400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದದಲ್ಲಿ ರಕ್ಷಣಾ ಖರೀದಿ ಸಮಿತಿ ಅನುಮೋದನೆ ನೀಡಿದೆ. ಈ ವ್ಯವಸ್ಥೆಯ ತಯಾರಕ ಕಂಪನಿ ಅಲ್ಮಾಜ್‌ಆಂಟೇ ಜತೆಗೆ ರಿಲಯನ್ಸ್ ಡಿಫೆನ್ಸ್‌ ಪಾಲುದಾರಿಕೆ ಮಾಡಿಕೊಂಡಿದೆ. ಭಾರತೀಯ ಸೇನೆಗೆ ಅಗತ್ಯವಿರುವ ವಾಯುದಾಳಿ ನಿರೋಧಕ ವ್ಯವಸ್ಥೆ ತಯಾರಿಕೆಯಲ್ಲಿ ಈ ಎರಡೂ ಕಂಪನಿಗಳು ಒಟ್ಟಾಗಿ ದುಡಿಯಲಿವೆ’ ಎಂದು ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ಸ್‌ 2015ರ ಡಿಸೆಂಬರ್‌ 24ರಂದು ಹೊರಡಿಸಿದ್ದ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.