ADVERTISEMENT

ಮತಾಂತರ ಗಂಭೀರ ವಿಚಾರ, ರಾಜಕೀಯ ಬಣ್ಣ ಬೇಡ: ಸುಪ್ರೀಂ ಕೋರ್ಟ್‌

ಪಿಟಿಐ
Published 9 ಜನವರಿ 2023, 14:03 IST
Last Updated 9 ಜನವರಿ 2023, 14:03 IST
.
.   

ನವದೆಹಲಿ: ಮತಾಂತರ ಗಂಭೀರ ವಿಚಾರ, ಅದಕ್ಕೆ ರಾಜಕೀಯ ಬಣ್ಣ ನೀಡುವುದು ಬೇಡ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ.

ಆಮಿಷದ ಮತಾಂತರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿರುವ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಈ ಕುರಿತು ನೆರವು ನೀಡುವಂತೆ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರನ್ನು ಕೇಳಿತು.

ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಸಿ.ಟಿ. ರವಿಕುಮಾರ್‌ ಅವರನ್ನು ಒಳಗೊಂಡ ನ್ಯಾಯಪೀಠವು, ‘ನಮಗೆ ನಿಮ್ಮ (ಅಟಾರ್ನಿ ಜನರಲ್‌) ಸಹಕಾರವೂ ಬೇಕು’ ಎಂದು ತಿಳಿಸಿತು.

ADVERTISEMENT

ಈ ವೇಳೆ ತಮಿಳುನಾಡು ಪರ ಹಿರಿಯ ವಕೀಲ ಪಿ.ವಿಲ್ಸನ್‌, ‘ಅರ್ಜಿಯು ರಾಜಕೀಯ ಪ್ರೇರಿತವಾಗಿದೆ. ರಾಜ್ಯದಲ್ಲಿ ಆಮಿಷದ ಮತಾಂತರದ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ, ‘ನಿಮ್ಮ ಅಭಿಪ್ರಾಯಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ವಿಚಾರವನ್ನು ಬೇರೆಡೆಗೆ ತಿರುಚಬೇಡಿ. ನಿಮ್ಮ ರಾಜ್ಯದಲ್ಲಿ ಆಮಿಷದ ಮತಾಂತರ ನಡೆಯುತ್ತಿದೆ ಎಂದರೆ ಅದು ತಪ್ಪು, ನಡೆಯುತ್ತಿಲ್ಲ ಎಂದರೆ ಸಂತಸದ ವಿಚಾರ. ಆದರೆ ಇದನ್ನು ರಾಜಕೀಯಗೊಳಿಸಬೇಡಿ’ ಎಂದು ಹೇಳಿತು.

ನಂತರ ಪ್ರಕರಣದ ವಿಚಾರಣೆಯನ್ನು ಫೆ. 7ಕ್ಕೆ ಮುಂದೂಡಲಾಯಿತು.

ಬಲವಂತದ ಮತಾಂತರವು ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡಬಹುದು ಮತ್ತು ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಪ್ರಭಾವ ಬೀರಬಹುದು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಹಾಗೆಯೇ ಇದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.