ADVERTISEMENT

ಆತ್ಮ ನಿರ್ಭರಕ್ಕೆ ಧಾರ್ಮಿಕ ಮಾರ್ಗದರ್ಶನ ಬೇಕು: ರಾಜನಾಥ್‌ ಸಿಂಗ್‌

ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 17:29 IST
Last Updated 29 ಆಗಸ್ಟ್ 2020, 17:29 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ಮೈಸೂರು: ಭಾರತವು ಆರ್ಥಿಕ ವಿಚಾರದಲ್ಲಷ್ಟೇ ‘ಆತ್ಮ ನಿರ್ಭರ’ ಆಗುವುದಲ್ಲ; ಸಾಂಸ್ಕೃತಿಕವಾಗಿ ಹಾಗೂ ಮಾನಸಿಕವಾಗಿಯೂ ‘ಆತ್ಮ ನಿರ್ಭರ’ವಾಗಬೇಕು. ಇದಕ್ಕೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನ ಬೇಕಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟರು.

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಸುತ್ತೂರು ಸಂಸ್ಥಾನದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 105ನೇ ಜಯಂತ್ಯುತ್ಸವದ ಡಿಜಿಟಲ್‌ ಕಾರ್ಯಕ್ರಮದಲ್ಲಿ ಅವರು ನವದೆಹಲಿಯಿಂದ ಮಾತನಾಡಿದರು.

‘ಆತ್ಮ ನಿರ್ಭರ ಹಾಗೂ ಹೊಸ ಭಾರತ ನಿರ್ಮಿಸಲು ನಾಗರಿಕತೆ ಹಾಗೂ ಸಂಸ್ಕೃತಿಗಳಿಂದ ಸ್ಫೂರ್ತಿ ಪಡೆದರೆ ತಪ್ಪಿಲ್ಲ. ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳಬಹುದು. ಆದರೆ, ಅದನ್ನೇ ನಕಲು ಮಾಡಬಾರದು ಅಷ್ಟೆ. ಅದಕ್ಕಾಗಿ ಶಿಕ್ಷಣ ಅತ್ಯಗತ್ಯವಾಗಿದೆ. ಶಿಕ್ಷಣವು ವ್ಯಕ್ತಿಯನ್ನು ಅಕ್ಷರಸ್ಥನನ್ನಾಗಿಸುವುದರ ಜೊತೆಗೆ ಜ್ಞಾನಿಯನ್ನಾಗಿಯೂ ಮಾಡಬೇಕು. ಅದು ಮೌಲ್ಯಾಧಾರಿತ ಹಾಗೂ ಆಧ್ಯಾತ್ಮಿಕ ತಳಹದಿಯಲ್ಲಿ ರೂಪುಗೊಳ್ಳಬೇಕು. ಹೊಸದಾಗಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಈ ವಿಚಾರಗಳಿಗೆ ಒತ್ತು ನೀಡಲಾಗಿದೆ’ ಎಂದರು.

ADVERTISEMENT

‘ಈ ಹಾದಿಯಲ್ಲಿ ಸುತ್ತೂರು ಮಠದ ಸೇವಾ ಕಾರ್ಯಗಳು ಸ್ಫೂರ್ತಿಯ ಸೆಲೆಯಾಗಿದ್ದು, ಮತ್ತಷ್ಟು ಮಾರ್ಗದರ್ಶನದ ಅಗತ್ಯವಿದೆ. ಶ್ರೀ ಮಠವು ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ವದ ಕಾಣಿಕೆ ನೀಡಿದೆ. ಹೊಸ ದಿಕ್ಕು ನೀಡಿದೆ. ಜಾಗೃತ ಭಾರತಕ್ಕೆ ಆಗಲೇ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮುನ್ನುಡಿ ಬರೆದಿದ್ದರು’ ಎಂದು ಶ್ಲಾಘಿಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,‌ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಸಂಸದ ಪ್ರತಾಪಸಿಂಹ, ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.