ADVERTISEMENT

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್‌ ಬಂಧನ: ಜಾವಡೇಕರ್‌, ಸ್ಮೃತಿ ಇರಾನಿ ಖಂಡನೆ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್

ಪಿಟಿಐ
Published 4 ನವೆಂಬರ್ 2020, 7:08 IST
Last Updated 4 ನವೆಂಬರ್ 2020, 7:08 IST
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್   

ನವದೆಹಲಿ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಅವರ ಬಂಧನವನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್‌, ಸ್ಮೃತಿ ಇರಾನಿ ಮತ್ತು ರವಿಶಂಕರ ಪ್ರಸಾದ್ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಜಾವಡೇಕರ್, ‘ಮಹಾರಾಷ್ಟ್ರ ಸರ್ಕಾರ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆಸಿದ ದಾಳಿ’ ಎಂದು ಬಣ್ಣಿಸಿದ್ದು ‘ಇದು ತುರ್ತುಪರಿಸ್ಥಿತಿ ದಿನಗಳನ್ನು ನೆನಪಿಸುತ್ತದೆ ಎಂದಿದ್ದಾರೆ. ‘ಮಹಾರಾಷ್ಟ್ರದಲ್ಲಿ ನಡೆದಿರುವ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ‘ ಎಂದು ಅವರು ಟ್ವೀಟ್ ಮಾಡಿದ್ದಾರೆ.

‌‘ಈ ರೀತಿ ಮಾಧ್ಯಮದೊಂದಿಗೆ ನಡೆದುಕೊಳ್ಳುವುದು ಸರಿಯಾದ ವಿಧಾನ ಅಲ್ಲ. ಮಾಧ್ಯಮದ ಮೇಲೆ ನಡೆದಿರುವ ಈ ದಾಳಿ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಅರ್ನಬ್ ಬಂಧನ ಖಂಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ, ‘ಪತ್ರಿಕಾ ಸ್ವಾತಂತ್ರ್ಯದ ಪರ ನಿಲ್ಲುವವರು, ಈ ಕ್ರಮವನ್ನು ಖಂಡಿಸಬೇಕು. ಇಲ್ಲದಿದ್ದರೆ, ನೀವು ಮೌನವಾಗಿ ಫ್ಯಾಸಿಸಂ ಅನ್ನು ಬೆಂಬಲಿಸುತ್ತೀರಿ ಎಂದು ಅರ್ಥವಾಗುತ್ತದೆ‘ ಎಂದು ಹೇಳಿದ್ದಾರೆ.

‘ನೀವು ಅರ್ನಬ್‌ ಗೋಸ್ವಾಮಿಯನ್ನು ಇಷ್ಟಪಡದಿರಬಹುದು. ಅವರ ನಡೆಯನ್ನು ಒಪ್ಪದಿರಬಹುದು. ಆದರೆ, ಪತ್ರಿಕಾ ಸ್ವಾತಂತ್ರ್ಯದ ಪರ ಇರುವಂಥವರು, ಈ ಸಮಯ ದಲ್ಲಿ, ಅವರ ಬಂಧನವನ್ನು ಖಂಡಿಸದೇ ಮೌನವಾಗಿದ್ದರೆ, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪರವಿದ್ದೀರಿ ಎಂದಾಗುತ್ತದೆ. ನೀವೇ ಮೌನವಾಗಿದ್ದರೆ, ಮುಂದೆ ನಿಂತು ಯಾರು ಮಾತನಾಡುತ್ತಾರೆ'ಎಂದು ಸ್ಮೃತಿ ಇರಾನಿ ಮಾಧ್ಯಮದವರನ್ನು ಪಶ್ನಿಸಿದ್ದಾರೆ.

‘ಇದು ಮಹಾರಾಷ್ಟ್ರ ಸರ್ಕಾರದ ಆಕ್ಷೇಪಾರ್ಹ ನಡೆ. ಆತಂಕಕಾರಿ ಬೆಳವಣಿಗೆ‘ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಅರ್ನಬ್ ಬಂಧನಕ್ಕೆ ಪ್ರತಿಕ್ರಿಯಿಸಿದ್ದಾರೆ.

‘1975ರಲ್ಲಿ ನಾವು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದೇವೆ. ಈಗ ಅದೇ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ‘ ಎಂದು ಸರಣಿ ಟ್ವೀಟ್ ಮಾಡಿರುವ ಪ್ರಸಾದ್‌, ಇದೇ ವೇಳೆ ಕಾಂಗ್ರೆಸ್‌ ನಾಯಕತ್ವದ ಮೌನವನ್ನು ಪ್ರಶ್ನಿಸಿದ್ದಾರೆ.

‘ಕಾಂಗ್ರೆಸ್ ನಾಯಕರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ಮೇಲೆ ‘ಪ್ರಚೋದಿತ ಆರೋಪಗಳೊಂದಿಗೆ ದಾಳಿ ನಡೆಸುತ್ತಾರೆ. ಆದರೆ, ಮಹಾರಾಷ್ಟ್ರದಲ್ಲಿ ತಮ್ಮದೇ ಸರ್ಕಾರ ‘ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ದಯವಾಗಿ ಹತ್ತಿಕ್ಕುತ್ತಿದ್ದರೂ, ಅವರು ಸಂಪೂರ್ಣವಾಗಿ ಮೌನವಾಗಿದ್ದಾರೆ‘ ಎಂದು ಆರೋಪಿಸಿದ್ದಾರೆ.

‘ಪ್ರಶ್ನೆಗಳನ್ನು ಕೇಳಿದರು ಎಂಬ ಒಂದೇ ಕಾರಣಕ್ಕೆ ಪೊಲೀಸ್ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅರ್ನಬ್ ಗೋಸ್ವಾಮಿಯವರನ್ನು ಬಂಧಿಸಿರುವುದನ್ನು ಎಲ್ಲರೂ ಖಂಡಿಸಬೇಕಾದ ವಿಷಯ‘ ಎಂದು ಪ್ರಸಾದ್ ಹೇಳಿದ್ದಾರೆ.

‘ಒಬ್ಬರು ಭಿನ್ನವಾಗಿರಬಹುದು, ಒಬ್ಬರು ಚರ್ಚಿಸಬಹುದು ಮತ್ತು ಒಬ್ಬರು ಪ್ರಶ್ನೆಗಳನ್ನು ಕೇಳಬಹುದು. ಆದಾಗ್ಯೂ ಅರ್ನಬ್‌ ಗೋಸ್ವಾಮಿಯವರನ್ನು ಬಂಧಿಸಿರುವುದು ಖಂಡನೀಯ‘ ಎಂದು ಕೇಂದ್ರ ಸಚಿವರು ಹೇಳಿದರು.

53 ವರ್ಷದ ಇಂಟೀರಿಯರ್ ಡಿಸೈನರ್ ಆತ್ಮಹತ್ಯೆ ಪ್ರಕರಣದ ಆರೋಪದ ಮೇಲೆ ಅರ್ನಬ್ ಗೋಸ್ವಾಮಿಯನ್ನು ಬುಧವಾರ ಮುಂಬೈನ ಅಲಿಬಾಗ್‌ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಗೋಸ್ವಾಮಿಅವರನ್ನು ಬಂಧಿಸಿ ವಾಹನಕ್ಕೆ ತಳ್ಳಿ ಕೂರಿಸಿದರು. ಗೋಸ್ವಾಮಿ ಅವರು ‘ಪೊಲೀಸರು ಹಲ್ಲೆ ನಡೆಸಿದ್ದಾರೆ‘ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.