ADVERTISEMENT

ಹೆಚ್ಚುವರಿ ಮತ: ವರದಿ ಸುಳ್ಳು - ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ

ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ

ಪಿಟಿಐ
Published 18 ಏಪ್ರಿಲ್ 2024, 12:46 IST
Last Updated 18 ಏಪ್ರಿಲ್ 2024, 12:46 IST
.
.   

ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಒಂದು ಹೆಚ್ಚುವರಿ ಮತವನ್ನು ತೋರಿಸಿವೆ ಎಂಬ ಆರೋಪ ಸುಳ್ಳು ಎಂದು ಕೇಂದ್ರ ಚುನಾವಣಾ ಆಯೋಗ, ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಇವಿಎಂ ಮೂಲಕ ಚಲಾಯಿಸಲಾದ ಮತಗಳನ್ನು ವಿವಿ–ಪ್ಯಾಟ್‌ (ಮತದಾನ ದೃಢೀಕರಣ ರಸೀದಿ ಯಂತ್ರ) ರಸೀದಿ ಮೂಲಕ ತಾಳೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ.

‘ಅಣಕು ಮತದಾನದ ವೇಳೆ ಒಂದು ಹೆಚ್ಚುವರಿ ಮತವನ್ನು ತೋರಿಸಿದೆ ಎಂಬ ವರದಿ ಸುಳ್ಳು. ಜಿಲ್ಲಾಧಿಕಾರಿ ಅವರೂ ಈ ಬಗ್ಗೆ ಪರಿಶೀಲಿಸಿದ್ದು, ಆರೋಪ ಸುಳ್ಳು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವಿವರವಾದ ವರದಿಯನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ’ ಎಂದು ಉಪ ಚುನಾವಣಾ ಆಯುಕ್ತ ನಿತೇಶ್‌ ಕುಮಾರ್ ವ್ಯಾಸ್‌ ಅವರು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತಾ ಅವರಿದ್ದ ಪೀಠಕ್ಕೆ ತಿಳಿಸಿದರು. 

ADVERTISEMENT

ಅರ್ಜಿದಾರ ಎನ್‌ಜಿಒ 'ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ಅವರು, ಅಣಕು ಮತದಾನದ ವೇಳೆ ಇವಿಎಂಗಳು ಒಂದು ಹೆಚ್ಚುವರಿ ಮತವನ್ನು ತೋರಿಸುತ್ತಿರುವ ಬಗ್ಗೆ ವರದಿಗಳಿವೆ ಎಂದು ಪೀಠಕ್ಕೆ ತಿಳಿಸಿದರು. ಈ ಬಗ್ಗೆ ಪರಿಶೀಲಿಸುವಂತೆ ಚುನಾವಣಾ ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ಮಣಿಂದರ್‌ ಸಿಂಗ್‌ ಅವರಿಗೆ ಪೀಠವು ಸೂಚಿಸಿತು.

ದೂರು ನೀಡಲು ಎಲ್‌ಡಿಎಫ್‌ ನಿರ್ಧಾರ

ಕಾಸರಗೋಡು : ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಡೆದ ಅಣಕು ಮತದಾನದ ವೇಳೆ ಕೆಲವು ಮತಯಂತ್ರಗಳಲ್ಲಿ ದೋಷ ಕಂಡುಬಂದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಹೇಳಿದೆ.

‘ಬೇರೆ ಪಕ್ಷದ ಅಭ್ಯರ್ಥಿಗೆ ಹಾಕಿದ ಮತಗಳು ಬಿಜೆಪಿ ಅಭ್ಯರ್ಥಿಯ ಪರ ದಾಖಲಾಗಿವೆ. ಬುಧವಾರ ನಡೆದ ಅಣಕು ಮತದಾನದ ಸಮಯದಲ್ಲಿ 2–3 ಮತಯಂತ್ರಗಳಲ್ಲಿ ಇಂತಹ ದೋಷ ಕಂಡುಬಂದಿವೆ’ ಎಂದು ಸಿಪಿಎಂ ಮುಖಂಡ ಕೆ.ಪಿ.ಸತೀಶ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.