ಗಣರಾಜ್ಯೋತ್ಸವ ಪಥಸಂಚಲನದ ವೇಳೆ ಪ್ರದರ್ಶನ ನೀಡಿದ ಕಲಾವಿದರು.
ರರಾ
ನವದೆಹಲಿ: ಜಾನಪದ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು 5,000 ಕಲಾವಿದರು ದೇಶದ ಬೇರೆ ಬೇರೆ ಪ್ರದೇಶಗಳ 45 ಪ್ರಕಾರದ ನೃತ್ಯಗಳನ್ನು ಗಣರಾಜ್ಯೋತ್ಸವ ಪಥಸಂಚಲನದ ವೇಳೆ ಪ್ರದರ್ಶಿಸಿದರು. ಇಡೀ ಕರ್ತವ್ಯ ಪಥವನ್ನು ಆವರಿಸಿಕೊಂಡ ಕಲಾ ತಂಡಗಳು, ನೋಡುಗರ ಕಣ್ಣಿಗೆ ಹಬ್ಬದ ಅನುಭವ ನೀಡಿದವು.
ಕಲಾವಿದರು ತಮ್ಮದೇ ಸಾಂಸ್ಕೃತಿಕ ವೇಷಭೂಷಣಗಳು, ಆಭರಣಗಳು, ರಕ್ಷಾ ಕವಚಗಳು, ಶಸ್ತ್ರಾಸ್ತ್ರಗಳು, ಸಂಗೀತ ವಾದ್ಯಗಳೊಂದಿಗೆ ಪಾರಂಪರಿಕ ನೃತ್ಯಗಳಿಗೆ ಜೀವ ತುಂಬಿದರು.
150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಗೌರವಾರ್ಥವಾಗಿ, ನಡೆಸಿದ ನೃತ್ಯ ರೂಪಕವು ಜಾನಪದ ಹಾಗೂ ಬುಡಕಟ್ಟು ಪರಂಪರೆಯ ಕಲಾ ಶ್ರೀಮಂತಿಕೆಯನ್ನು ಸಾರಿತು.
'ವಿಕಸಿತ ಭಾರತ', 'ಏಕ ಭಾರತ; ಶ್ರೇಷ್ಠ ಭಾರತ' ವಿಷಯಾಧಾರಿತ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.
ಸಂಗೀತ ನಾಟಕ ಅಕಾಡೆಮಿಯು 'ಜಯತಿ ಜಯ ಮಮಃ ಭಾರತಂ' ಶೀರ್ಷಿಕೆಯ 11 ನಿಮಿಷಗಳ ಪ್ರದರ್ಶನ ನೀಡಿತು. ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ರಂಗಪರಿಕರಗಳ ವಿನ್ಯಾಸ ವೀಕ್ಷಕರ ಮನಸೂರೆಗೊಂಡಿತು.
ಎಲ್ಲ ವೀಕ್ಷಕರಿಗೂ ಒಂದೇ ರೀತಿಯ ವೀಕ್ಷಣೆಯ ಅನುಭವವನ್ನು ಉಂಟುಮಾಡುವ ಸಲುವಾಗಿ, ಇದೇ ಮೊದಲ ಬಾರಿಗೆ ಇಡೀ ಕರ್ತವ್ಯ ಪಥದಲ್ಲಿ ಒಂದೇ ಬಾರಿಗೆ ಪ್ರದರ್ಶನಗಳು ನಡೆದವು.
ದೇಶದ ಬೇರೆ ಬೇರೆ ಪ್ರದೇಶಗಳಿಂದ ಬಂದಿದ್ದ ವಿವಿಧ ಹಿನ್ನೆಲೆಯ ಕಲಾವಿದರು, ಯುವ ಶಕ್ತಿ, ಕಲಾ ಪರಂಪರೆ ಮತ್ತು ಮಹಿಳಾ ಸಬಲೀಕರಣವನ್ನು ಪ್ರತಿನಿಧಿಸಿ ಸಂಗೀತ ಪ್ರದರ್ಶನ ನೀಡಿದರು. ಇದರೊಂದಿಗೆ, ಪಥಸಂಚಲನವು ರಾಷ್ಟ್ರದ ವೈವಿಧ್ಯ ಸಂಸ್ಕೃತಿ, ಸಾಮರಸ್ಯವನ್ನು ಸಾರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.