ADVERTISEMENT

AN–32 ವಿಮಾನ ಪತನ ಸ್ಥಳದಲ್ಲಿ ‘ಏರ್‌ಡ್ರಾಪ್‌’ ಯಶಸ್ವಿ; ಬದುಕುಳಿದವರಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 9:57 IST
Last Updated 12 ಜೂನ್ 2019, 9:57 IST
   

ನವದೆಹಲಿ:ಭಾರತೀಯ ವಾಯುಪಡೆಯ AN-32 ವಿಮಾನ ಪತನಗೊಂಡಿರುವ ದುರ್ಗಮ ಸ್ಥಳಕ್ಕೆ ‘ಏರ್‌ ಡ್ರಾಪ್‌’ ಮಾಡುವಲ್ಲಿ ವಾಯಪಡೆ ಬುಧವಾರ ಯಶಸ್ವಿಯಾಗಿದ್ದು, ಬದುಕುಳಿದವರಿಗಾಗಿ ಶೋಧ ನಡೆಸುತ್ತಿದೆ.

‌ಘಟನಾ ಸ್ಥಳವನ್ನು ಮಂಗಳವಾರ ಪತ್ತೆ ಮಾಡಿದ್ದ ವಾಯುಪಡೆ, ಆ ಸ್ಥಳದ ಸಮೀಪದಲ್ಲಿ ಇಂದು 8ರಿಂದ 10 ಹುಡುಕು ತಜ್ಞರನ್ನು 04–ಗರುಡ ಹೆಲಿಕಾಪ್ಟರ್‌ ಮೂಲಕ ಇಳಿಸುವಲ್ಲಿ ಯಶಸ್ವಿಯಾಗಿದೆ.

ಸ್ಥಳದಲ್ಲಿ ಬದುಕುಳಿದವರಿಗಾಗಿ ಹೆಚ್ಚುವರಿ ಸಂಪನ್ಮೂಲಗಳೊಂದಿಗೆ ಶೋಧ ನಡೆಸಲಾಗುತ್ತಿದೆ ಹಾಗೂ ತಾತ್ಕಾಲಿಕ ಶಿಬಿರವನ್ನು ನಿರ್ಮಿಸಲಾಗಿದೆ ಎಂದು ವಾಯುಪಡೆ ಟ್ವೀಟ್‌ ಮಾಡಿದೆ.

ADVERTISEMENT
ವಿಮಾನ ಪತನಗೊಂಡಿರುವ ಸ್ಥಳದ ಚಿತ್ರಗಳು ಮಂಗಳವಾರ ರಾತ್ರಿ ಲಭ್ಯವಾಗಿದ್ದವು.

ವಿಮಾನ ಪತನಗೊಂಡ ಸ್ಥಳದ ಹುಡುಕಾಟ ನಡೆಸಿದ್ದ ವೈಮಾನಿಕ ದೃಶ್ಯದ ವಿಡಿಯೊವನ್ನು ಎಎನ್‌ಐ ಟ್ವೀಟ್‌ ಮಾಡಿದೆ.

ಅರುಣಾಚಲ ಪ್ರದೇಶದ ಲಿಪೋ ಎಂಬಲ್ಲಿಂದ 16 ಕಿ.ಮೀ ದೂರದಲ್ಲಿ ವಿಮಾನ ಪತನಗೊಂಡಿದೆ ಎಂಬ ಮಾಹಿತಿ ಪತ್ತೆ ಕಾರ್ಯದಲ್ಲಿ ತೊಡಗಿದ್ದ ತಂಡಕ್ಕೆ ಮಂಗಳವಾರ ತಿಳಿಯಿತು. ಈ ಸ್ಥಳದಲ್ಲಿ ವಾಯುಪಡೆಯ AM–17v5, ಚೀತಾ ಹೆಲಿಕಾಪ್ಟರ್‌ಗಳ ಮೂಲಕ ವೈಮಾನಿಕ ಪರಿಶೀಲನೆ ನಡೆಸಲಾಯಿತು. ಆಗ ಒಂದು ಪ್ರದೇಶದಲ್ಲಿ ಮರಗಳು ಧ್ವಂಸಗೊಂಡಿರುವ ದೃಶ್ಯ ಕಾಣಿಸಿದೆ. ಆ ಸ್ಥಳದಲ್ಲಿ ಕೂಲಂಕಷವಾಗಿ ಪರಿಶೀಲಿಸಿದಾಗ ವಿಮಾನದ ಅವಶೇಷಗಳು ಪತ್ತೆಯಾಗಿವೆ.

ಕಳೆದ ಸೋಮವಾರ 13ಮಂದಿ ಸೇನಾ ಸಿಬ್ಬಂದಿಯನ್ನು ಹೊತ್ತ An-32 ವಿಮಾನವು ಅರುಣಾಚಲ ಪ್ರದೇಶದ ಮೆನ್‌ಚುಕಾಗೆ ತೆರಳಲು ಅಸ್ಸಾಂನ ಜೊರ್ಹತ್‌ ವಾಯುನೆಲೆಯಿಂದ ಮಧ್ಯಾಹ್ನ 12.27ಕ್ಕೆ ಟೇಕಾಫ್‌ ಆಗಿತ್ತು. ಆದರೆ, 1 ಗಂಟೆ ಹೊತ್ತಿಗೆ ಅದು ನಿಯಂತ್ರಣ ಕಳೆದುಕೊಂಡಿತ್ತು. ಅಂದಿನಿಂದ ಇಂದಿನವರೆಗೆ ವಾಯುಪಡೆ, ಭೂಸೇನೆ, ಸ್ಥಳೀಯ ಪೊಲೀಸರು, ರಾಜ್ಯ ಸರ್ಕಾರ, ಅರೆ ಸೇನಾ ಪಡೆ, ಸ್ಥಳೀಯರು ವಿಮಾನಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.