ನವದೆಹಲಿ: ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ ಶೇ 4ರಷ್ಟು ಮೀಸಲಾತಿ ನೀಡುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ತೀರ್ಮಾನದ ವಿಷಯವು ಲೋಕಸಭೆಯಲ್ಲಿ ಬುಧವಾರ ಪ್ರಸ್ತಾಪವಾಗಿ ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.
ಗಮನ ಸೆಳೆಯುವ ಸೂಚನೆ ವೇಳೆ ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿಷಯ ಪ್ರಸ್ತಾಪಿಸಿ, ‘ಕಾಂಗ್ರೆಸ್ ಸರ್ಕಾರವು ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದೆ. ಮುಸ್ಲಿಮರಿಗೆ ಈಗಾಗಲೇ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ನಿರ್ಧರಿಸಿರುವುದು ಕಾನೂನುಬಾಹಿರ. ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಕಡಿತ ಮಾಡಿ ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಹೊರಟಿದೆ’ ಎಂದರು.
‘1937ರಲ್ಲಿ ಮುಸ್ಲಿಂ ಲೀಗ್ ಜೊತೆ ಮೈತ್ರಿ ಮಾಡಿಕೊಂಡು ಪ್ರಾಂತೀಯ ಸರ್ಕಾರಗಳನ್ನು ರಚಿಸುವ ಕಾಂಗ್ರೆಸ್ ನಿರ್ಧಾರವು 1947ರಲ್ಲಿ ಧಾರ್ಮಿಕ ಆಧಾರದ ಮೇಲೆ ಭಾರತದ ವಿಭಜನೆಗೆ ಕಾರಣವಾಯಿತು ಎಂದು ದುಬೆ ಹೇಳಿದರು. ‘ಈಗ ಜಾತಿ ಜನಗಣತಿಯ ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಧರ್ಮದ ಹೆಸರಿನಲ್ಲಿ ಸರ್ಕಾರಿ ಗುತ್ತಿಗೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷವು ಮತ ಬ್ಯಾಂಕ್‌ಗಾಗಿ ಭಾರತವನ್ನು ಮತ್ತೆ ವಿಭಜಿಸಲು ಬಯಸುತ್ತಿದೆ’ ಎಂದು ಅವರು ಆರೋಪಿಸಿದರು.
‘ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮರನ್ನು ಓಲೈಸುವ ಪ್ರವೃತ್ತಿ ವಿರೋಧ ಪಕ್ಷಗಳಲ್ಲಿ ಹೆಚ್ಚಾಗಿದೆ. ತೆಲಂಗಾಣದಲ್ಲಿ ಒಬಿಸಿ ಪಟ್ಟಿಗೆ ಮುಸ್ಲಿಮರನ್ನು ಸೇರಿಸುವ ಪ್ರಯತ್ನ ನಡೆದಿದೆ’ ಎಂದು ಅವರು ದೂರಿದರು. ಆಗ ಬಿಜೆಪಿ ಸದಸ್ಯರು ನಾಚಿಕೆಗೇಡು ಎಂದು ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಸದಸ್ಯರು ಇದಕ್ಕೆ ಆಕ್ಷೇಪಿಸಿದರು. ಈ ವೇಳೆ ಗದ್ದಲ ಉಂಟಾಯಿತು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ‘ಇದೊಂದು ಪ್ರಮುಖ ವಿಷಯ. ಸಂಸದರು ತಮ್ಮ ಕಳಕಳಿಯನ್ನು ಸದನ ಹಾಗೂ ಸಚಿವಾಲಯದ ಗಮನಕ್ಕೆ ತರುತ್ತಿದ್ದಾರೆ’ ಎಂದರು.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಸರ್ಕಾರಿ ಟೆಂಡರ್‌ಗಳಲ್ಲಿ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಅತಿಯಾದ ತುಷ್ಟೀಕರಣಕ್ಕೆ ಮುಂದಾಗಿದೆ. ಜಾತ್ಯತೀತ ಸರ್ಕಾರಗಳು ಈ ರೀತಿ ಧರ್ಮದ ಆಧಾರದ ಮೇಲೆ ಓಲೈಸುವ ಕ್ರಮಗಳನ್ನು ಕೈಗೊಳ್ಳುವ ಯಾವುದೇ ಅಧಿಕಾರ ಹೊಂದಿರುವುದಿಲ್ಲ. ಈಗಾಗಲೇ ನಿಷೇಧಕ್ಕೆ ಒಳಗಾಗಿರುವ ಪಿಎಫ್ಐ ಮತ್ತು ಕೆಎಫ್‌ಡಿಯಂತಹ ಸಮಾಜಘಾತುಕ ಶಕ್ತಿಗಳ ‘ಕೈ’ಗಳನ್ನು ಇನ್ನಷ್ಟು ಭದ್ರಪಡಿಸುವ ಹುನ್ನಾರ ಇದಾಗಿದೆ’ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸರ್ಕಾರದ ಮುಸ್ಲಿಂ ಮೀಸಲಾತಿ ಮಸೂದೆ ಅಸಾಂವಿಧಾನಿಕ. ಅದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.