ADVERTISEMENT

ವಿದ್ಯಾರ್ಥಿಗಳ ಆತ್ಮಹತ್ಯೆ; ಪಾಲಕರಿಂದ ಹೊಣೆಗಾರಿಕೆ ನಿರ್ವಹಣೆ ಅಗತ್ಯ: ತಜ್ಞರ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 16:00 IST
Last Updated 20 ಫೆಬ್ರುವರಿ 2024, 16:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜೈಪುರ: ‘ವೃತ್ತಿಪರ ಕೋರ್ಸ್‌ ಸೇರಿದಂತೆ ಯಾವುದೇ ಶಿಕ್ಷಣಕ್ಕೆ ಸಂಬಂಧಿಸಿ ‌ಮಕ್ಕಳ ಸಾಮರ್ಥ್ಯವನ್ನು ಪಾಲಕರು ಅರಿಯುವುದು ಮುಖ್ಯ. ಜೊತೆಗೆ, ಪಾಲಕರಾಗಿ ತಮ್ಮ ಜವಾಬ್ದಾರಿಯನ್ನು ಸಹ ಅವರು ಸರಿಯಾಗಿ ನಿರ್ವಹಣೆ ಮಾಡುವುದು ಅಗತ್ಯ’ ಎಂದು ಮಾನಸಿಕ ಆರೋಗ್ಯ ತಜ್ಞರು ಪ್ರತಿಪಾದಿಸಿದ್ದಾರೆ.

ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯಲು ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್‌ ಸೆಂಟರ್‌ಗೆ ಸೇರಿದವರ ಪೈಕಿ ಇತ್ತೀಚೆಗೆ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ತಜ್ಞರು ಈ ಕಿವಿಮಾತು ಹೇಳಿದ್ದಾರೆ.

ADVERTISEMENT

‘ಎಲ್ಲ ಪಾಲಕರು ತಮ್ಮ ಉದ್ಯೋಗ ಬಿಟ್ಟು, ತರಬೇತಿಗಾಗಿ ತೆರಳುವ ತಮ್ಮ ಮಕ್ಕಳೊಂದಿಗೆ ಕೋಟಾದಲ್ಲಿ ಇರಲು ಸಾಧ್ಯ ಇಲ್ಲ. ಆದರೆ, ತೀವ್ರ ಒತ್ತಡಕ್ಕೆ ಒಳಗಾಗಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟುವ ಕಾರ್ಯ ವ್ಯವಸ್ಥಿತವಾಗಿ ನಡೆಯಬೇಕು’ ಎಂದು ‘ಮಿಸ್ತು ಕೇರ್’ನ ಕ್ಲಿನಿಕಲ್‌ ಮನೋವೈದ್ಯೆ ರಕ್ಷಾ ರಾಜೇಶ್‌ ಹೇಳುತ್ತಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮೊಟ್ಟ ಮೊದಲನೆದಾಗಿ, ಯಾವ ಕೋರ್ಸ್‌ಗೆ ಸೇರಲು ವಿದ್ಯಾರ್ಥಿ ಸಮರ್ಥ ಇದ್ದಾನೆ ಎಂಬುದನ್ನು ಗುರುತಿಸುವ ಕೆಲಸವಾಗಬೇಕು’ ಎಂದು ಹೇಳಿದರು.

‘ಪಾಲಕರಲ್ಲಿ ಸಂವೇದನಾಶೀಲತೆ ಕೊರತೆ, ತಮ್ಮ ಮಕ್ಕಳಿಂದ ಅತಿಯಾದ ನಿರೀಕ್ಷೆ, ಶೈಕ್ಷಣಿಕ ಸಾಧನೆಯನ್ನೇ ಮುಖ್ಯವಾಗಿಸಿಕೊಳ್ಳುವುದು ಹಾಗೂ ತಮ್ಮ ಸುತ್ತಲಿರುವ ಇತರ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ಮಾಡುವುದು. ಈ ಎಲ್ಲ ಸಂಗತಿಗಳು ವಿದ್ಯಾರ್ಥಿಗಳು ಕೆಟ್ಟ ನಿರ್ಧಾರ ಕೈಗೊಳ್ಳುವಂತೆ ಮಾಡುತ್ತವೆ’ ಎಂದೂ ವಿವರಿಸಿದರು.

ಮಾನಸಿಕ ಆರೋಗ್ಯ ತಜ್ಞರ ಸಲಹೆಗಳು

  • ಪಾಲಕರು ಮಕ್ಕಳಲ್ಲಿ ಸುರಕ್ಷತೆ ಭಾವನೆ ಮೂಡಿಸಬೇಕು

  • ವೈಫಲ್ಯ ಜೀವನದ ಒಂದು ಭಾಗ ಮಾತ್ರ;ಅದು ಬದುಕಿನ ಅಂತ್ಯವಲ್ಲ ಎಂಬುದನ್ನು ಪಾಲಕರು ಮಕ್ಕಳಿಗೆ ಮನವರಿಕೆ ಮಾಡಬೇಕು

  • ವೈಫಲ್ಯ ಕುರಿತು ತಮ್ಮಲ್ಲಿರುವ ಆತಂಕದಿಂದ ಹೊರಬರಲು ಮಕ್ಕಳಿಗೆ ನೆರವಾಗಬೇಕು

  • ಮಕ್ಕಳಲ್ಲಿ ಕಂಡುಬರುವ ಅಸಹಜ ವರ್ತನೆಯನ್ನು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು

  • ಮಕ್ಕಳ ಮೇಲೆ ಒತ್ತಡ ಹೇರುವುದು ಮತ್ತು ಅವರನ್ನು ಪ್ರೇರೇಪಿಸುವ ನಡುವೆ ವ್ಯತ್ಯಾಸ ಇದೆ ಎಂಬುದನ್ನು ಪಾಲಕರು ಅರ್ಥ ಮಾಡಿಕೊಳ್ಳಬೇಕು

  • ಮಕ್ಕಳು ಭಾವನಾತ್ಮಕವಾಗಿ ತನ್ನ ಕುಟುಂಬದಲ್ಲಿಯೇ ಸುರಕ್ಷಿತವಾಗಿರು‌ತ್ತಾರೆ. ತಾನು ಎದುರಿಸುತ್ತಿರುವ ಒತ್ತಡವನ್ನು ಧೈರ್ಯದಿಂದ ತನ್ನ ಪಾಲಕರಿಗೆ ಹೇಳುವಂತಿರಬೇಕು 

  • ಕೋಚಿಂಗ್‌ ಕೇಂದ್ರಗಳು ಮನೋವೈದ್ಯರು ಮಾನಸಿಕ ಆರೋಗ್ಯ ತಜ್ಞರು ಹಾಗೂ ಆಪ್ತ ಸಮಾಲೋಚಕರ ನೆರವು ಪಡೆಯುವುದನ್ನು ಕಡ್ಡಾಯಗೊಳಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.