ADVERTISEMENT

ರೈತರ ಜೊತೆ ಮಾತುಕತೆಗೆ ಪ್ರತಿಪಕ್ಷಗಳ ಆಗ್ರಹ

ಮೇ 26ರ ಪ್ರತಿಭಟನೆಗೆ ಬೆಂಬಲ; ಕೃಷಿ ಕಾಯ್ದೆಗಳ ವಾಪಸ್‌ಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಮೇ 2021, 21:00 IST
Last Updated 23 ಮೇ 2021, 21:00 IST
   

ನವದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಆರು ತಿಂಗಳಿನಿಂದ ಚಳವಳಿ ಹಮ್ಮಿಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಇದೇ 26ರಂದು (ಬುಧವಾರ) ದೇಶವ್ಯಾಪಿ ಕರೆನೀಡಿರುವ ಪ್ರತಿಭಟನೆಗೆ 12 ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.

ಪ್ರತಿಭಟನನಿರತ ರೈತರ ಜೊತೆ ಮತ್ತೆ ಮಾತುಕತೆ ಶುರು ಮಾಡುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ಹೇಮಂತ್ ಸೊರೇನ್ ಮತ್ತು ಎಂ.ಕೆ. ಸ್ಟಾಲಿನ್ ಅವರು ಕೇಂದ್ರ ಸರ್ಕಾರವನ್ನುಒತ್ತಾಯಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಖಾತರಿ ಕೊಡುವಂತೆ ರೈತರು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

‘ಸ್ವಾಮಿನಾಥನ್ ಸಮಿತಿ ಶಿಫಾರಸು ಮಾಡಿರುವ ರೀತಿಯಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡುವುದು ಹಾಗೂತಕ್ಷಣ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ನಾವು ಆಗ್ರಹಿಸುತ್ತೇವೆ.ಹಟ ಹಿಡಿಯದೇ ರೈತರ ಜೊತೆ ಮಾತುಕತೆಗೆ ಮುಂದಾಗಬೇಕು’ ಎಂದು ಪ್ರತಿಪಕ್ಷಗಳ ನಾಯಕರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಜೆಡಿಎಸ್‌ ಮುಖ್ಯಸ್ಥ ಎಚ್‌.ಡಿ. ದೇವೇಗೌಡ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ಸಿಪಿಐನ ಡಿ.ರಾಜಾ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರೂ ಕೇಂದ್ರಕ್ಕೆ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ.

ದೇಶದ ನಾನಾ ಕಡೆಗಳಿಂದ ಬಂದಿರುವ ರೈತರು ದೆಹಲಿಯ ಗಡಿಗಳಲ್ಲಿ ಸುದೀರ್ಘ ಅವಧಿಯಿಂದ ಬೀಡುಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.