ಕೋಲ್ಕತ್ತ: ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆ ಮಾಡಿದ ಸಂಜಯ್ ರಾಯ್‌ಗೆ ಸಿಯಾಲದಹ ನ್ಯಾಯಾಲಯವು ಮರಣ ದಂಡನೆ ವಿಧಿಸದೆ ಇರುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಸೆ ವ್ಯಕ್ತಪಡಿಸಿದ್ದಾರೆ.
‘ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದಾಗ ಆತ ಪೆರೋಲ್ ಮೇಲೆ ಜೈಲಿನಿಂದ ಹೊರಬರಬಹುದು. ನಾನು ಒಂದು ಕಾಲದಲ್ಲಿ ವಕೀಲೆಯಾಗಿ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿದ್ದೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಅಲ್ಲವೆಂದು ಸಿಯಾಲದಹ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ. ಇದು ಅಂತಹ ಪ್ರಕರಣ ಅಲ್ಲ ಎಂದಾದರೆ, ಇನ್ಯಾವ ಬಗೆಯ ಪ್ರಕರಣ ಇದು’ ಎಂದು ಮಮತಾ ಕೇಳಿದ್ದಾರೆ.
ಸಿಯಾಲದಹ ನ್ಯಾಯಾಲಯ ನೀಡಿರುವ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಮಮತಾ ಅವರು ‘ಎಕ್ಸ್ ’ಮೂಲಕ ತಿಳಿಸಿದ್ದಾರೆ.
ಮೇಲ್ಮನವಿ ಸಲ್ಲಿಸಲು ಅನುಮತಿ
ಕೋಲ್ಕತ್ತ (ಪಿಟಿಐ): ಸಿಯಾಲದಹ ನ್ಯಾಯಾಲಯ ನೀಡಿರುವ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ. ಅಪರಾಧಿ ಸಂಜಯ್ ರಾಯ್‌ಗೆ ಮರಣ ದಂಡನೆ ವಿಧಿಸಬೇಕು ಎಂಬ ಕೋರಿಕೆಯೊಂದಿಗೆ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಬೇಕು ಎಂಬ ಮನವಿಯನ್ನು ರಾಜ್ಯದ ಅಡ್ವೊಕೇಟ್ ಜನರಲ್ ಕಿಶೋರ್ ದತ್ತ ಅವರು ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.