ಕೋಲ್ಕತ್ತ: ಆರ್.ಜಿ. ಕರ್ ಆಸ್ಪತ್ರೆಯ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಮೃತಳ ತಾಯಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬೇಕೆಂದು ಕೋರಿಕೆ ವ್ಯಕ್ತಪಡಿಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆಯೂ ಪ್ರಶ್ನಿಸಿದ್ದಾರೆ.
'ಪ್ರಧಾನಿಯವರನ್ನು ಭೇಟಿಯಾಗಿ ನನ್ನ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡುವುದಾಗಿ' ಮೃತಳ ತಾಯಿ ತಿಳಿಸಿದ್ದಾರೆ.
'ನನ್ನ ಮಗಳು ದೊಡ್ಡ ಕನಸು ಕಂಡಿದ್ದಳು. ಅವಳು ಇಷ್ಟು ಬೇಗ ಮೃತಪಡುತ್ತಾಳೆ ಎಂದು ಊಹಿಸಿರಲಿಲ್ಲ. ಅವಳು ನನ್ನ ಬಿಟ್ಟು ಹೋಗಿ ಏಳು ತಿಂಗಳುಗಳಾಗಿವೆ. ಆದರೆ ನ್ಯಾಯ ಎಲ್ಲಿದೆ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯನ್ನು ಭೇಟಿಯಾಗಬೇಕೆಂಬ ಮೃತ ತಾಯಿಯ ಕೋರಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಅಗ್ನಿಮಿತ್ರ ಪಾಲ್, 'ಪ್ರಧಾನಿಯವರನ್ನು ಭೇಟಿ ಮಾಡಲು ಪಡೆಯಲು ಒಂದು ಪ್ರಕ್ರಿಯೆ ಇದೆ. ನಮ್ಮ ಪ್ರಧಾನಿ ಅವರು ನಿಮ್ಮ ಸಮಸ್ಯೆಯನ್ನು ಖಂಡಿತ ಆಲಿಸುತ್ತಾರೆ' ಭರವಸೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ರಾಜ್ಯ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಮಾತನಾಡಿ, 'ಈ ದೇಶದಲ್ಲಿ ಯಾರಿಗಾದರೂ ಪ್ರಧಾನಿ ಅವರನ್ನು ಭೇಟಿ ಮಾಡುವ ಹಕ್ಕಿದೆ. ಆದರೆ ಈ ಘಟನೆ ವಿರುದ್ಧ ಮಮತಾ ಬ್ಯಾನರ್ಜಿ ಕಠಿಣ ಕ್ರಮಕೈಗೊಂಡಿದ್ದರು. ಇದರಿಂದಾಗಿ ಅಪರಾಧಿಗೆ ಜೀವವಾಧಿ ಶಿಕ್ಷೆಯಾಗಿದೆ' ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 9ರಂದು ಕೋಲ್ಕತ್ತದ ಆರ್.ಜಿ ಕರ್ ಆಸ್ಪತ್ರೆಯ 31 ವರ್ಷದ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದರು. ದೇಶದಾದ್ಯಂತ ಈ ಘಟನೆ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.