
ಬಿಹಾರದ ಸಮಸ್ತಿಪುರದಲ್ಲಿ ರೋಡ್ ಶೋದಲ್ಲಿ ಪಾಲ್ಗೊಂಡ ಪ್ರಿಯಾಂಕಾ ಗಾಂಧಿ ಅವರು ಅಭಿಮಾನಿಯ ಕೈಕುಲುಕಿದರು
ಪಿಟಿಐ ಚಿತ್ರ
ಸಹರ್ಸಾ (ಬಿಹಾರ): ಕೇಂದ್ರದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಆರ್‌ಜೆಡಿಯು ಬಿಹಾರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದರು.
ಉತ್ತರ ಬಿಹಾರದ ಸಹರ್ಸಾದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡ ಅವರು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಪಕ್ಷವು ಆರ್‌ಜೆಡಿಯ ಬೆದರಿಕೆಗೆ ಮಣಿದು ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲು ಒಪ್ಪಿಕೊಂಡಿತು ಎಂಬ ಹೇಳಿಕೆಯನ್ನು ಪ್ರಧಾನಿ ಪುನರುಚ್ಚರಿಸಿದರು.
‘ಬಿಹಾರದಲ್ಲಿ ಈಗಾಗಲೇ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್, ಈ ಚುನಾವಣೆಯಲ್ಲಿ ಆರ್‌ಜೆಡಿಯನ್ನು ಮುಳುಗಿಸಲು ಪ್ರತಿಜ್ಞೆ ಮಾಡಿದೆ’ ಎಂದು ಟೀಕಿಸಿದರು. ಆರ್‌ಜೆಡಿ ಮಾಡಿರುವ ‘ಪಾಪ’ಗಳಿಗೆ ಜನರು ಈ ಚುನಾವಣೆಯಲ್ಲಿ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಅವರು ಮತದಾರರಿಗೆ ಮನವಿ ಮಾಡಿದರು.
‘2005ರಲ್ಲಿ ಬಿಹಾರದಲ್ಲಿ ಅಧಿಕಾರ ಕಳೆದುಕೊಡ ಸಮಯದಲ್ಲಿ ಆರ್‌ಜೆಡಿಯು ಕೇಂದ್ರದಲ್ಲಿ ಯುಪಿಎ ಸರ್ಕಾರದ ಭಾಗವಾಗಿತ್ತು. ‘ಕೋಸಿ ಮಹಾಸೇತು’ನಂತಹ ಯೋಜನೆಗಳನ್ನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಮಂಜೂರು ಮಾಡಿತ್ತು. 2005ರಲ್ಲಿ ನಿತೀಶ್ ಕುಮಾರ್ ಅವರು ಹೊಸ ಸರ್ಕಾರ ರಚಿಸಿದಾಗ ಆರ್‌ಜೆಡಿ ಎಷ್ಟು ಕೋಪಗೊಂಡಿತ್ತು ಎಂದರೆ, ಪ್ರಧಾನಿ ಮನಮೋಹನ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರ ಮೇಲೆ ಒತ್ತಡ ಹೇರಿ ಬಿಹಾರದಲ್ಲಿ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಿತ್ತು’ ಎಂದು ಆರೋಪಿಸಿದರು.
ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ‘ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟವು ನುಸುಳುಕೋರರ ಬಗ್ಗೆ ಮೃದು ಧೋರಣೆ ತಳೆಯುತ್ತಿದೆ. ಆದರೆ, ಅಯೋಧ್ಯೆಯ ರಾಮ ಮಂದಿರ ಮತ್ತು ಛತ್ ಉತ್ಸವದ ಬಗ್ಗೆ ತಿರಸ್ಕಾರದಿಂದ ವರ್ತಿಸುತ್ತಿದೆ’ ಎಂದು ದೂರಿದರು.
‘ಆರ್‌ಜೆಡಿ ಮತ್ತು ಕಾಂಗ್ರೆಸ್ ನಾಯಕರಿಗೆ ವಿದೇಶದಲ್ಲಿರುವ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ಸಮಯ ಸಿಗುತ್ತದೆ. ಆದರೆ, ಅಯೋಧ್ಯೆಗೆ ಭೇಟಿ ನೀಡಲು ಸಮಯ ಸಿಗುವುದಿಲ್ಲ’ ಎಂದರು.
ಸಹರ್ಸಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿಯಲ್ಲಿ ಪಾಲ್ಗೊಂಡ ಜನಸ್ತೋಮ
ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಬಿಜೆಪಿಯು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ. ಬದಲಿಗೆ ತನ್ನದೇ ಪಕ್ಷದ 'ಚೇಲಾ'ಗೆ ಹುದ್ದೆ ನೀಡುತ್ತದೆ–ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು ‘ಮೋದಿ ಅವರು ವಿರೋಧ ಪಕ್ಷಗಳ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾರೆ. ಆದರೆ ಅಭಿವೃದ್ಧಿಯ ವಿಚಾರದ ಬಗ್ಗೆ ಮಾತನಾಡುವುದಿಲ್ಲ’ ಎಂದು ದೂರಿದರು. ಸಹರ್ಸಾ ಜಿಲ್ಲೆಯ ಸೋನ್‌ಬರ್ಸಾದಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ಅನಗತ್ಯ ವಿಷಯಗಳ ಬಗ್ಗೆ ಮಾತನಾಡುವ ಪ್ರಧಾನಿ ಅವರು ಬಿಹಾರದಲ್ಲಿ ಎನ್‌ಡಿಎ ಸರ್ಕಾರದ ಭ್ರಷ್ಟಾಚಾರ ಅಥವಾ ದುರಾಡಳಿತದ ಬಗ್ಗೆ ಒಂದು ಮಾತನ್ನೂ ಹೇಳುವುದಿಲ್ಲ. ರಾಷ್ಟ್ರ ಹಾಗೂ ಬಿಹಾರವನ್ನು ಅವಮಾನ ಮಾಡುವುದರತ್ತ ಗಮನ ಕೇಂದ್ರೀಕರಿಸಿರುವ ಅವರು ‘ಅಪಮಾನ್ ಮಂತ್ರಾಲಯ’ ಹೆಸರಿನ ಹೊಸ ಸಚಿವಾಲಯ ಸ್ಥಾಪಿಸಲಿ’ ಎಂದರು. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆರ್‌ಜೆಡಿ ನಾಯಕರು ಬಿಹಾರದಲ್ಲಿ ‘ಛತಿ ಮೈಯಾ’ಗೆ (ಛತಿ ದೇವಿ) ಅವಮಾನಿಸುತ್ತಿದ್ದಾರೆ. ರಾಜ್ಯದ ಜನತೆ ಇವರನ್ನು ಕ್ಷಮಿಸುವುದಿಲ್ಲ’ ಎಂದು ಪ್ರಧಾನಿ ಕೆಲ ದಿನಗಳ ಹಿಂದೆ ಹೇಳಿದ್ದರು. ಅದಕ್ಕೆ ಪ್ರಿಯಾಂಕಾ ತಿರುಗೇಟು ನೀಡಿದ್ದಾರೆ. ‘ಚುನಾವಣೆಯ ಸಮಯದಲ್ಲಿ ಬಿಹಾರದ ಜನರಿಗೆ ವಿವಿಧ ಭರವಸೆಗಳನ್ನು ನೀಡುವ ಮೊದಲು ಮೋದಿ ಮತ್ತು ಅಮಿತ್ ಶಾ ಅವರು ಎನ್‌ಡಿಎ ಸರ್ಕಾರ ಕಳೆದ 20 ವರ್ಷಗಳಲ್ಲಿ ರಾಜ್ಯಕ್ಕೆ ಏನು ಮಾಡಿದೆ ಎಂಬುದನ್ನು ತಿಳಿಸಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಮತ್ತು ಜೆಡಿಯು ಬಿಹಾರದಲ್ಲಿ ಕಳೆದ 20 ವರ್ಷಗಳಲ್ಲಿ ‘ವಲಸೆ ಉದ್ಯಮ’ವನ್ನು ಮಾತ್ರ ಸ್ಥಾಪಿಸಿದೆ ಎಂದು ಕಾಂಗ್ರೆಸ್ ಸೋಮವಾರ ಟೀಕಿಸಿದೆ. ‘ಒಂದು ಕಾಲದಲ್ಲಿ ಸಕ್ಕರೆ ಕಾಗದ ಸೆಣಬು ರೇಷ್ಮೆ ಮತ್ತು ಡೇರಿ ಕ್ಷೇತ್ರದ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದ್ದ ಬಿಹಾರವು ಇಂದು ನಿರುದ್ಯೋಗ ಮತ್ತು ವಲಸೆಗೆ ಹೆಸರು ಪಡೆದಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಹೇಳಿದ್ದಾರೆ. ‘ಬಿಹಾರದ ಜನರು ಉದ್ಯೋಗ ಅರಸಿ ಬೇರೆ ಕಡೆ ವಲಸೆ ಹೋಗುವಂತಾಗಿದೆ. ಬಿಜೆಪಿ-ಜೆಡಿಯು ಆಡಳಿತವು ರಾಜ್ಯದಲ್ಲಿ ವಲಸೆ ಉದ್ಯಮವನ್ನು ಮಾತ್ರ ಸ್ಥಾಪಿಸಿದೆ. ಅಭಿವೃದ್ಧಿ ಮತ್ತು ಕೈಗಾರಿಕೆಯ ನಕ್ಷೆಯಿಂದ ಬಿಹಾರವನ್ನು ವಾಸ್ತವಿಕವಾಗಿ ಅಳಿಸಿಹಾಕಲಾಗಿದೆ’ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರ್‌ಜೆಡಿಯ ತೇಜಸ್ವಿ ಯಾದವ್ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ‘ಇಂಡಿ (ಇಂಡಿಯಾ) ಮೈತ್ರಿಕೂಟದ ಮೂರು ಮಂಗಗಳು’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟೀಕಿಸಿದರು. ದರ್ಭಂಗಾ ಜಿಲ್ಲೆಯ ಕೆವಟಿ ವಿಧಾನಸಭಾ ಕ್ಷೇತ್ರದಲ್ಲಿ ರ್‍ಯಾಲಿಯಲ್ಲಿ ಪಾಲ್ಗೊಂಡ ಅವರು ‘ಈ ಮೂರು ಹೊಸ ಮಂಗಗಳಿಗೆ ಆಡಳಿತಾರೂಢ ಎನ್‌ಡಿಎ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ನೋಡಲು ಸಾಧ್ಯವಾಗಿಲ್ಲ ಆ ಬಗ್ಗೆ ಕೇಳಲು ಇಷ್ಟವಿಲ್ಲ ಮತ್ತು ಮಾತನಾಡಲು ಅಸಮರ್ಥವಾಗಿವೆ’ ಎಂದರು. ‘ಮಹಾತ್ಮ ಗಾಂಧಿಯವರ ಮೂರು ಮಂಗಗಳು ಕೆಟ್ಟದ್ದನ್ನು ನೋಡಲಿಲ್ಲ ಕೇಳಲಿಲ್ಲ ಮತ್ತು ಮಾತನಾಡಲಿಲ್ಲ. ಆದರೆ ಈಗ ‘ಇಂಡಿ’ ಮೈತ್ರಿಕೂಟದಲ್ಲಿ ಪಪ್ಪು ಟಪ್ಪು ಮತ್ತು ಅಪ್ಪು ಹೆಸರಿನ ಮೂರು ಮಂಗಗಳಿವೆ. ಅದರಲ್ಲಿ ‘ಪಪ್ಪು’ ಎನ್‌ಡಿಎ ಮಾಡಿರುವ ಯಾವುದೇ ಒಳ್ಳೆಯ ಕೆಲಸಗಳನ್ನು ನೋಡುವುದಿಲ್ಲ. ‘ಟಪ್ಪು’ವಿಗೆ ಅದರ ಬಗ್ಗೆ ಕೇಳಲು ಸ್ವಲ್ಪವೂ ಇಷ್ಟವಿಲ್ಲ ಮತ್ತು ‘ಅಪ್ಪು’ ಮಾತನಾಡುವಾಗ ಆ ಕೆಲಸಗಳನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.