ADVERTISEMENT

ಬರಲಿಲ್ಲ ಆಂಬ್ಯುಲೆನ್ಸ್ : ಹಿಮಪಾತದ ನಡುವೆ ಸೇನೆ ವಾಹನದಲ್ಲೇ ಆಯ್ತು ಹೆರಿಗೆ

ಏಜೆನ್ಸೀಸ್
Published 2 ಫೆಬ್ರುವರಿ 2021, 4:10 IST
Last Updated 2 ಫೆಬ್ರುವರಿ 2021, 4:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆ ಸೇನಾ ವಾಹನದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದಿದೆ.

ಸೋಮವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬಳಿಕ ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನರಿಕೋಟ್‌ನಲ್ಲಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಿದೆ. ಆದರೆ, ಹಿಮಪಾತದ ಕಾರಣ ಆಂಬುಲೆನ್ಸ್ ಬರುತ್ತಿಲ್ಲ, ಹಾಗಾಗಿ ನೆರವಿಗೆ ಧಾವಿಸುವಂತೆ ಕಲಾರೂಸ್ ಕಂಪನಿ ಕಮಾಂಡರ್‌ಗೆ ಆಶಾ ಕಾರ್ಯಕರ್ತೆಯೊಬ್ಬರು ಕರೆ ಮಾಡಿ ಮನವಿ ಮಾಡಿದ್ದರು.

ADVERTISEMENT

ಕೂಡಲೇ ವೈದ್ಯಕೀಯ ತಂಡದ ಜೊತೆಗೆ ಸೇನಾ ವಾಹನವನ್ನು ನರಿಕೋಟ್ ಪ್ರದೇಶಕ್ಕೆ ಕಳುಹಿಸಲಾಗಿದೆ. ಬಳಿಕ, ಮಹಿಳೆಯನ್ನು ಕರೆದುಕೊಮಡು ಸೇನಾ ವಾಹನದಲ್ಲೇ ಆಸ್ಪತ್ರೆ ಕಡೆಗೆ ಹೊರಟಿದ್ದರು.

ಆದರೆ, ಮಾರ್ಗ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿದೆ. ರಸ್ತೆಗಳು ಬಂದ್ ಆಗಿ ಪ್ರಯಾಣ ವಿಳಂಬವಾಗಿದೆ. ಈ ಮಧ್ಯೆ, ಪರಿಸ್ಥಿತಿ ಗಂಭೀರವಾಗಿರುವುದರಿಂದ ವಾಹನವನ್ನು ನಿಲ್ಲಿಸಲು ಗರ್ಭಿಣಿ ಜೊತೆಗಿದ್ದ ಆಶಾ ಕಾರ್ಯಕರ್ತೆ ಸೇನಾ ಸಿಬ್ಬಂದಿಗೆ ಹೇಳಿದ್ದಾರೆ. ಸೇನೆಯ ವೈದ್ಯಕೀಯ ತಂಡದ ಜೊತೆ ಆಶಾ ಕಾರ್ಯಕರ್ತೆ ವಾಹನದಲ್ಲೇ ಹೆರಿಗೆ ಮಾಡಿಸಿದ್ದಾರೆ.

ಬಳಿಕ ತಾಯಿ ಮತ್ತು ಮಗುವನ್ನು ಕಲರೂಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಮಪಾತದ ವೇಳೆ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಕಣಿವೆಯ ಜನ ಅನುಭವಿಸುತ್ತಿರುವ ಸಂಕಷ್ಟಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಕಠಿಣ ಸಂದರ್ಭದಲ್ಲಿ ಧೈರ್ಯಶಾಲಿ ಆಶಾ ಕಾರ್ಯಕರ್ತೆಯ ಕೆಲಸಕ್ಕೆ ಸೇನೆ ಅಭಿನಂದನೆ ಸಲ್ಲಿಸಿದೆ. ಆಶ ಕಾರ್ಯಕರ್ತೆಗೆ ಧನ್ಯವಾದ ತಿಳಿಸಿರುವ ಕಮಾಂಡರ್ ಗಿಫ್ಟ್ ಕೊಟ್ಟು ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.