ADVERTISEMENT

ಮುಂಬೈ: ಸರ್ಕಾರದ ಅಧಿಕೃತ ಸಭೆಯಲ್ಲಿ ಮುಖ್ಯಮಂತ್ರಿ ಠಾಕ್ರೆ ಸಂಬಂಧಿ ಭಾಗಿ

ಪರ್ಯಾಯ ಶಕ್ತಿ ಕೇಂದ್ರದ ಉದಯ: ಬಿಜೆಪಿ ಆರೋಪ

ಪಿಟಿಐ
Published 4 ಡಿಸೆಂಬರ್ 2019, 15:42 IST
Last Updated 4 ಡಿಸೆಂಬರ್ 2019, 15:42 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ: ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಅಧಿಕೃತ ಸಭೆಯಲ್ಲಿ ಯುವ ಸೇನಾ ಕಾರ್ಯದರ್ಶಿಯೂ ಆಗಿರುವ ಠಾಕ್ರೆ ಸಂಬಂಧಿ ವರುಣ್‌ ಸರ್ದೇಸಾಯಿ ಭಾಗವಹಿಸಿರುವುದು ಬುಧವಾರ ವಿವಾದ ಹುಟ್ಟಿಹಾಕಿದೆ. ಇದು ‘ಪರ್ಯಾಯ ಶಕ್ತಿ ಕೇಂದ್ರ’ದ ಉದಯ ಎಂದು ಬಿಜೆಪಿ ಹೇಳಿದೆ.

ಮುಖ್ಯಮಂತ್ರಿಗಳ ಪುತ್ರ ಹಾಗೂ ವರ್ಲಿ ಕ್ಷೇತ್ರದ ಶಾಸಕ ಆದಿತ್ಯ ಠಾಕ್ರೆ ಸಹ ರಾಜ್ಯದ ಸಚಿವಾಲಯದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಆದಿತ್ಯ ಅವರು ಶಿವಸೇನಾದ ಯುವ ಘಟಕದ ಯುವ ಸೇನಾದ ಮುಖ್ಯಸ್ಥರಾಗಿದ್ದಾರೆ.ಉದ್ಧವ್‌ ಠಾಕ್ರೆ ಅವರ ಪತ್ನಿ ರಷ್ಮಿ ಅವರ ಸೋದರಳಿಯ ಸರ್ದೇಸಾಯಿ ಅವರು ಸಭೆಯಲ್ಲಿ ಭಾಗವಹಿಸಿರುವುದು ಫೋಟೊಗಳಲ್ಲಿ ಕಂಡುಬಂದಿದೆ.

‘ಮುಖ್ಯಮಂತ್ರಿ ಕಚೇರಿ ಹೊರತುಪಡಿಸಿ ಪರ್ಯಾಯ ಶಕ್ತಿ ಕೇಂದ್ರ ಸೃಷ್ಟಿಯಾಗಿದೆ ಎಂಬುದು ಕಂಡುಬರುತ್ತಿದೆ. ಇದು ಸರ್ಕಾರದ ಕಾರ್ಯಚಟುವಟಿಕೆಗಳ ಗೋಪ್ಯತೆಯ ಉಲ್ಲಂಘನೆಯಾಗಿದೆ. ಇಂಥ ತಪ್ಪು ಮರುಕಳಿಸಬಾರದು’ ಎಂದು ಬಿಜೆಪಿ ಮುಖ್ಯ ವಕ್ತಾರ ಮಾಧವ್‌ ಭಂಡಾರಿ ಹೇಳಿದ್ದಾರೆ.

ADVERTISEMENT

ಮಹಾ ವಿಕಾಸ ಆಘಾಡಿ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿ ಸಹ ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ‘ಆಡಳಿತದ ಅನುಭವವಿಲ್ಲದ ಸಂಪೂರ್ಣ ಹೊಸ ಸರ್ಕಾರ ರಾಜ್ಯದಲ್ಲಿದೆ. ಮುಂದೆ ಇಂಥ ತಪ್ಪು ಆಗುವುದಿಲ್ಲ’ ಎಂದು ಎನ್‌ಸಿಪಿ ಮುಖ್ಯ ವಕ್ತಾರ ನವಾಬ್‌ ಮಲೀಕ್‌ ಹೇಳಿದ್ದಾರೆ.

‘ಅಧಿಕೃತ ಸಭೆಯಲ್ಲಿ ಯಾರು ಭಾಗವಹಿಸಬೇಕು, ಬೇಡ ಎಂಬುವುದನ್ನು ನಿರ್ಧರಿಸುವ ವಿಶೇಷ ಅಧಿಕಾರ ಮುಖ್ಯಮಂತ್ರಿಗಳಿಗಿದೆ. ಅಲ್ಲದೇ, ಗೃಹ ಇಲಾಖೆಗೆ ಸಂಬಂಧಿಸಿದ ಗೋಪ್ಯತೆಯ ಸಭೆಯೇನಲ್ಲ. ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದ ಸಭೆಯಾಗಿದ್ದು, ಸಭೆಯಲ್ಲಿ ಪ್ರಸ್ತಾಪಗೊಂಡ ವಿಷಯಗಳು ಸಹ ಈಗಾಗಲೇ ಬಹಿರಂಗವಾಗಿವೆ’ ಎಂದು ಸರ್ದೇಸಾಯಿ ಹೇಳಿದ್ದಾರೆ.

ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು ಮುಖ್ಯಮಂತ್ರಿಯಾದಾಗ ಅವರ ಪತ್ನಿ ಅಮೃತಾ ಸಹ ಅಧಿಕೃತ ಸಭೆಗಳಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.