ADVERTISEMENT

2030ರ ವೇಳೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 13–14 ಕೋಟಿ ಹೊಸ ಉದ್ಯೋಗಾವಕಾಶ: ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2023, 6:50 IST
Last Updated 28 ಆಗಸ್ಟ್ 2023, 6:50 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರವಾಸೋದ್ಯಮ ಕ್ಷೇತ್ರವು 2030ರ ವೇಳೆಗೆ ಭಾರತದ ಆರ್ಥಿಕತೆಗೆ ₹20 ಲಕ್ಷ ಕೋಟಿಗೂ ಹೆಚ್ಚು ಕೊಡುಗೆ ನೀಡುವ ಸಾಧ್ಯತೆಯಿದ್ದು, ಈ ಕ್ಷೇತ್ರದಲ್ಲಿ ಯುವಕರಿಗೆ 13– 14 ಕೋಟಿ ಹೊಸ ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ರೋಜ್‌ಗಾರ್ ಯೋಜನೆಯಡಿ ವಿವಿಧ ಉದ್ಯೋಗಗಳಿಗೆ ಹೊಸದಾಗಿ ನೇಮಕವಾಗಿರುವ ಸುಮಾರು 51 ಸಾವಿರ ಮಂದಿಗೆ ಇಂದು ನೇಮಕಾತಿ ಪತ್ರ ವಿತರಿಸಿದ ಬಳಿಕ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದರು.

ಯುವಕರು ದೇಶ ಸೇವೆ ಮಾಡುವ ಹಂಬಲ ಹೊಂದಿದ್ದಾರೆ. ಇಂದು ನೇಮಕಾತಿ ಪತ್ರ ಪಡೆದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಅಮೃತ ಕಾಲದಲ್ಲಿ ನಾನು ಅವರನ್ನು ಭಾರತದ ಜನರ ‘ಅಮೃತ ರಕ್ಷಕರು’ ಎಂದು ಕರೆಯುತ್ತೇನೆ ಎಂದು ಮೋದಿ ಕೊಂಡಾಡಿದ್ದಾರೆ.

ADVERTISEMENT

ಮೇಡ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಹೊಸ ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳ ಖರೀದಿಯತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ (ದೇಶೀಯ) ಉತ್ಪಾದನೆ ಹೆಚ್ಚಿಸುವುದರ ಜತೆಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ಈ ದಶಕದಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ. ನಾನು ಈ ಭರವಸೆ ನೀಡುವ ಮೂಲಕ ನೀಡಿದ ಭರವಸೆಗಳನ್ನು ಸಂಪೂರ್ಣ ಜವಾಬ್ದಾರಿಯಿಂದ ಈಡೇರಿಸುತ್ತೇನೆ ಎಂದಿದ್ದಾರೆ.

ನಮ್ಮ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಅರೆಸೇನಾ ಪಡೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಫಾರ್ಮಾ ಮತ್ತು ಆಟೋಮೊಬೈಲ್ ಉದ್ಯಮವು ವೇಗವಾಗಿ ಬೆಳೆಯುತ್ತಿದ್ದು, ಇವು ಮುಂದಿನ ದಿನಗಳಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. ಇವೆರಡೂ ಉದ್ಯಮಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿವೆ ಎಂದು ಮೋದಿ ತಿಳಿಸಿದ್ದಾರೆ.

ಉತ್ತರ ಪ್ರದೇಶವು ಒಂದು ಕಾಲದಲ್ಲಿ ಅಪರಾಧಕ್ಕೆ ಹೆಸರುವಾಸಿಯಾಗಿತ್ತು, ಆದರೆ, ಇಂದು ಕಾನೂನು ಮತ್ತು ಸುವ್ಯವಸ್ಥೆ ಸ್ಥಾಪನೆಯಾದ ನಂತರ ಅದು ತನ್ನ ಹೂಡಿಕೆಗಳಿಗೆ ಹೆಸರುವಾಸಿಯಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ.

ದೇಶದಾದ್ಯಂತ ನಡೆದಿರುವ ಈ ಹೊಸ ನೇಮಕಾತಿಯಲ್ಲಿ ಉದ್ಯೋಗ ಪಡೆದಿರುವವರು ಕಂದಾಯ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ಅಂಚೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ‌, ಜಲಸಂಪನ್ಮೂಲ ಇಲಾಖೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯ ಸೇರಿ ವಿವಿಧ ಸಚಿವಾಲಯಗಳು ಹಾಗೂ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ.

ದೇಶದಾದ್ಯಂತ 45 ಸ್ಥಳಗಳಲ್ಲಿ ರೋಜ್‌ಗಾರ್ ಮೇಳ ನಡೆಸಲಾಗಿತ್ತು. ಈ ಯೋಜನೆಯಡಿ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇಮಕಾತಿಗಳು ನಡೆಯುತ್ತಿವೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್‌ಗಾರ್ ಮೇಳ ಮಹತ್ವದ ಹೆಜ್ಜೆಯಾಗಿದೆ ಎಂದು ಪಿಎಂಒ ತಿಳಿಸಿದೆ.

ಜುಲೈ 22ರಂದು ರೋಜ್‌ಗಾರ್ ಯೋಜನೆಯಡಿ ವಿವಿಧ ಉದ್ಯೋಗಗಳಿಗೆ ಹೊಸದಾಗಿ ನೇಮಕವಾಗಿರುವ ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿಗೆ ನೇಮಕಾತಿ ಪತ್ರಗಳನ್ನು ಮೋದಿ ವಿತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.