ನವದೆಹಲಿ: ಅಕ್ರಮ ವಲಸೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) 2021 ರಿಂದ ಈವರೆಗೆ 586 ಬಾಂಗ್ಲಾದೇಶಿ ಪ್ರಜೆಗಳು ಮತ್ತು 318 ರೋಹಿಂಗ್ಯಾಗಳು ಸೇರಿದಂತೆ ಒಟ್ಟು 916 ಜನರನ್ನು ಬಂಧಿಸಿದೆ. ಇದು ರಾಷ್ಟ್ರವನ್ನು ರಕ್ಷಿಸುವ ಬದ್ಧತೆಯನ್ನು ತೋರಿಸುತ್ತದೆ ಎಂದು ರೈಲ್ವೆ ಸಚಿವಾಲಯ ಭಾನುವಾರ ಹೇಳಿದೆ.
ಇವರಲ್ಲಿ ಕೆಲವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೋಲ್ಕತ್ತದಂತಹ ಗಮ್ಯಸ್ಥಾನಗಳಿಗೆ ರೈಲಿನಲ್ಲಿ ಪ್ರಯಾಣಿಸುವಾಗ ಅವರನ್ನು ಬಂಧಿಸಲಾಗಿದೆ ಎಂದು ಸಚಿವಾಲಯ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
2024ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶದ ಗಡಿಯಲ್ಲಿ ಹೆಚ್ಚಿನ ಭದ್ರತಾ ಕ್ರಮಗಳ ಹೊರತಾಗಿಯೂ, ಅಕ್ರಮ ವಲಸಿಗರು ಭಾರತದೊಳಗೆ ನುಸುಳುವ ಪ್ರಯತ್ನ ಮುಂದುವರೆಸಿದ್ದಾರೆ. ಇವರು ಅಸ್ಸಾಂ ಮೂಲಕ ಭಾರತಕ್ಕೆ ಪ್ರವೇಶಿಸಲು ರೈಲ್ವೆ ಮಾರ್ಗವನ್ನು ಬಳಸುತ್ತಿದ್ದಾರೆ. ಬಳಿಕ ದೇಶದ ಇತರ ಭಾಗಗಳಿಗೆ ತಲುಪಲು ತಮ್ಮ ಆದ್ಯತೆಯ ಮಾರ್ಗ ಬಳಸುತ್ತಿದ್ದಾರೆ ಎಂದು ಎಂದು ರೈಲ್ವೆ ಸಚಿವಾಲಯ ಹೇಳಿದೆ.
ಈ ಸಮಸ್ಯೆಯನ್ನು ನಿಭಾಯಿಸಲು ಆರ್‌ಪಿಎಫ್, ಗಡಿ ಭದ್ರತಾ ಪಡೆ (BSF), ಸ್ಥಳೀಯ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದೆ. ಆದರೆ ಬಂಧಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರ್‌ಪಿಎಫ್‌ಗೆ ಅಧಿಕಾರವಿಲ್ಲ. ಬದಲಾಗಿ, ಬಂಧಿತ ವ್ಯಕ್ತಿಗಳನ್ನು ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಪೊಲೀಸರು ಮತ್ತು ಇತರ ಅಧಿಕೃತ ಏಜೆನ್ಸಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದೂ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.