ನವೆದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ನೀತಿಗಳನ್ನು ಸಂಸತ್‌ನ ಹೊರಗೆ ಘೋಷಿಸುತ್ತಿದ್ದಾರೆ ಎಂದು ಆರ್‌ಎಸ್‌ಪಿ ಸಂಸದ ಎನ್.ಕೆ.ಪ್ರೇಮಚಂದ್ರನ್ ಅವರು ದೂರಿದ್ದಾರೆ.
ಈ ಸಂಬಂಧ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿದ್ದಾರೆ. ಅವರು ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
‘ಪ್ರಧಾನಿ ಮೋದಿಯವರ ನಡವಳಿಕೆ ಸಂಸತ್‌ಗೆ ಅಗೌರವ ತರುವಂತಿದೆ. ಅವರ ನಡವಳಿಕೆ ದಶಕಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಸದೀಯ ಸಂಪ್ರದಾಯಗಳಿಗೆ ಹೊರತಾದದ್ದು ಎಂಬ ರೂಲಿಂಗ್ ನೀಡಬೇಕು’ ಅವರು ದೂರಿನಲ್ಲಿ ಕೋರಿದ್ದಾರೆ.
‘ಸಂಸತ್‌ನ ಅಧಿವೇಶನ ನಡೆಯುತ್ತಿದೆ. ಈ ವೇಳೆ ಅವರು ಅಖಿಲ ಭಾರತ ವೈದ್ಯಕೀಯ ಸೀಟುಗಳಲ್ಲಿ ಒಬಿಸಿಗೆ ಮೀಸಲಾತಿ ನಿಗದಿ ಹಾಗೂ ಎಂಜಿನಿಯರಿಂಗ್ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಕುರಿತು ಘೋಷಣೆ ಮಾಡಿದ್ದಾರೆ’ ಎಂದು ಪ್ರೇಮಚಂದ್ರನ್ ದೂರಿನಲ್ಲಿ ವಿವರಿಸಿದ್ದಾರೆ.
‘ಪ್ರತಿಯೊಬ್ಬರು ಸಂಸತ್ ಹಾಗೂ ಅಲ್ಲಿ ಪಾಲಿಸಿಕೊಂಡು ಬರಲಾಗುತ್ತಿರುವ ಸಂಪ್ರದಾಯಗಳನ್ನು ಗೌರವಿಸಬೇಕು. ಸಂಸತ್‌ನ ಘನತೆಗೆ ಧಕ್ಕೆ ತರುವ ನಡೆಯನ್ನು ಖಂಡಿಸಬೇಕು ಹಾಗೂ ಅಂಥ ಕೃತ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಸೀಟುಗಳಲ್ಲಿ ಒಬಿಸಿಗೆ ಶೇ 27 ಹಾಗೂ ಇಡಬ್ಲ್ಯೂಎಸ್‌ನವರಿಗೆ ಶೇ 10ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವ ನಿರ್ಧಾರದ ಬಗ್ಗೆ ಪ್ರಧಾನಿ ಇತ್ತೀಚೆಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಪ್ರೇಮಚಂದ್ರನ್ ಅವರು ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.