ADVERTISEMENT

ಯಾರದ್ದೋ ಇಷ್ಟಕ್ಕೆ ಆರ್‌ಎಸ್‌ಎಸ್‌ ನಿಷೇಧಿಸಲು ಸಾಧ್ಯವಿಲ್ಲ:ದತ್ತಾತ್ರೇಯ ಹೊಸಬಾಳೆ

ಹಿಂದಿನ ವಿಚಾರದಿಂದ ಕಲಿಯಬೇಕು; ದತ್ತಾತ್ರೇಯ ಹೊಸಬಾಳೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 1:56 IST
Last Updated 2 ನವೆಂಬರ್ 2025, 1:56 IST
ದತ್ತಾತ್ರೇಯ ಹೊಸಬಾಳೆ–ಪಿಟಿಐ ಚಿತ್ರ
ದತ್ತಾತ್ರೇಯ ಹೊಸಬಾಳೆ–ಪಿಟಿಐ ಚಿತ್ರ   

ಜಬಲ್‌ಪುರ: ‘ಯಾರೋ ಬಯಸುತ್ತಾರೋ ಎಂದು ಸಂಘಟನೆಯನ್ನು ನಿಷೇಧಿಸಲು ಸಾಧ್ಯವಿಲ್ಲ, ಅಂತಹ ಬೇಡಿಕೆ ಇಡುವವರು ಈ ಹಿಂದಿನ ಅನುಭವಗಳಿಂದ ಪಾಠ ಕಲಿಯಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.

ಇಲ್ಲಿ ನಡೆದ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ನಿಷೇಧಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎಂದು ಪತ್ರಕರ್ತರು ಗಮನ ಸೆಳೆದ ವೇಳೆ, ‘ಈ ಹಿಂದೆ ಮೂರು ಸಲ ಅಂತಹ ಪ್ರಯತ್ನ ನಡೆಸಿತ್ತು. ಆಗ ಸಮಾಜವು ಏನು ಹೇಳಿತು? ನ್ಯಾಯಾಲಯವು ಏನು ಹೇಳಿತು? ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ, ಸಂಘದ ಚಟುವಟಿಕೆಯೂ ನಿರಂತರವಾಗಿ ಬೆಳೆದಿದೆ. ಸಂಘಟನೆಯನ್ನು ನಿಷೇಧಿಸಬೇಕಾದರೆ, ಸರಿಯಾದ ಕಾರಣ ಇರಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ಯಾರೋ ಬಯಸಿದ್ದಾರೋ ಎಂಬ ಕಾರಣಕ್ಕೆ ಸಂಘಟನೆ ನಿಷೇಧಿಸಲು ಸಾಧ್ಯವಿಲ್ಲ. ಭಾರತದ ಏಕತೆ, ಭದ್ರತೆ ಹಾಗೂ ಸಂಸ್ಕೃತಿಗಾಗಿ ಕೆಲಸ ಮಾಡುವ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಒಬ್ಬ ನಾಯಕರು ಹೇಳಿದರೆ, ಅದಕ್ಕೆ ಸೂಕ್ತ ಕಾರಣವನ್ನು ನೀಡಬೇಕು’ ಎಂದು ವಿವರಿಸಿದ್ದಾರೆ.

ADVERTISEMENT

‘ಸಮಾಜವು ಆರ್‌ಎಸ್‌ಎಸ್‌ ಅನ್ನು ಸ್ವೀಕರಿಸಿದೆ. ಸರ್ಕಾರಿ ವ್ಯವಸ್ಥೆಯೂ ಇಂತಹ ನಿಷೇಧವನ್ನು ತಪ್ಪು ಎಂದು ಹೇಳಿದೆ. ಈಗ ನಿಷೇಧದ ಮಾತನಾಡುವ ಹಿಂದಿನ ಅನುಭವದಿಂದ ಪಾಠ ಕಲಿಯಲಿ’ ಎಂದು ಸಲಹೆ ನೀಡಿದ್ದಾರೆ.

ಬಿಹಾರ, ಪಶ್ವಿಮ ಬಂಗಾಳ ವಿಧಾನಸಭಾ ಚುನಾವಣೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಹಾರ ಚುನಾವಣೆ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ. ದೇಶ ಹಾಗೂ ಸಮಾಜದ ಹಿತದೃಷ್ಟಿಯಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಮುಂದೆ ಬಂದು ಮತ ಚಲಾಯಿಸಬೇಕು ಎಂಬುದು ಸಂಘದ ನಿಲುವಾಗಿದೆ ಹೊರತು ಹಣ ಹಾಗೂ ಜಾತಿ ಆಧರಿಸಿ ಅಲ್ಲ. ಈ ವಿಚಾರದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು’ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಕಾಲಕಾಲಕ್ಕೆ ನವೀಕರಿಸಬೇಕು. ಯಾರಾದರೂ ಈ ಪ್ರಕ್ರಿಯೆಗೆ ಆಕ್ಷೇಪಣೆ ಸಲ್ಲಿಸುವುದಿದ್ದರೆ, ನೇರವಾಗಿ ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ಹೊಸಬಾಳೆ ತಿಳಿಸಿದ್ದಾರೆ.  

ದತ್ತಾತ್ರೇಯ ಹೊಸಬಾಳೆ–ಪಿಟಿಐ ಚಿತ್ರ

'ಬಂಗಾಳದಲ್ಲಿ ಪರಿಸ್ಥಿತಿ ಗಂಭೀರ’

‘ಪಶ್ಚಿಮ ಬಂಗಾಳದ ಸ್ಥಿತಿಗತಿ ಕುರಿತಂತೆ ಯಾವುದೇ ಚರ್ಚೆ ನಡೆದಿಲ್ಲ. ಈ ಹಿಂದೆ ಚರ್ಚೆ ನಡೆದಿತ್ತು. ಅಲ್ಲಿನ ಪರಿಸ್ಥಿತಿಯೂ ಗಂಭೀರವಾಗಿದೆ. ಈ ಹಿಂದಿನ ಸಭೆಯಲ್ಲಿ ನಿಲುವಳಿಯನ್ನು ಅಂಗೀಕರಿಸಲಾಗಿತ್ತು. ಸಂಘದ ಕಾರ್ಯಚಟುವಟಿಕೆಯನ್ನು ಅಲ್ಲಿ ವ್ಯಾಪಕವಾಗಿ ವಿಸ್ತರಿಸಲಾಗಿದೆ. ಆದರೆ ಕಳೆದ ಚುನಾವಣೆಯ ನಂತರ ರಾಜಕೀಯ ನಾಯಕತ್ವಕ್ಕಾಗಿ ಅಲ್ಲಿನ ಮುಖ್ಯಮಂತ್ರಿ ಅವರು ದ್ವೇಷ ಹರಡುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ’ ಎಂದು ದತ್ತಾತ್ರೇಯ ಹೊಸಬಾಳೆ ಆರೋಪಿಸಿದ್ದಾರೆ. ‘ಬಂಗಾಳವು ದೇಶದ ಗಡಿ ರಾಜ್ಯವಾಗಿದೆ.

ಬಾಂಗ್ಲಾದೇಶದಿಂದ ಅಲ್ಲಿನ ಜನರು ಒಳನುಸುಳುತ್ತಿರುವ ಕಾರಣ ಒತ್ತಡ ಸೃಷ್ಟಿಯಾಗಿದೆ. ಈ ಸಮಸ್ಯೆಯನ್ನು ಕೊನೆಗೊಳಿಸಲು ರಾಜಕೀಯ ನಾಯಕತ್ವವು ವಿಫಲವಾದರೆ ಬಂಗಾಳದ ಜನರಿಗೆ ಮಾಡುವ ಅನ್ಯಾಯವಾಗಿದೆ. ಒಂದು ಕಾಲದಲ್ಲಿ ಇಡೀ ದೇಶಕ್ಕೆ ಮಾರ್ಗದರ್ಶನ ನೀಡಿದ್ದ ರಾಜ್ಯವು ಅಸ್ಥಿರತೆ ಹಾಗೂ ಹಿಂಸಾಚಾರದಿಂದ ನಲುಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಮಾಜದ ಏಕತೆಗಾಗಿ ಆರ್‌ಎಸ್‌ಎಸ್‌ನ ಕಾರ್ಯಕರ್ತರು ಬಂಗಾಳದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ’ ಎಂದು ಒತ್ತಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.