ADVERTISEMENT

ಮಣಿಪುರಕ್ಕೆ RSS ಮುಖ್ಯಸ್ಥ: 2023ರಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಭೇಟಿ

ಪಿಟಿಐ
Published 19 ನವೆಂಬರ್ 2025, 7:26 IST
Last Updated 19 ನವೆಂಬರ್ 2025, 7:26 IST
ಮೋಹನ್ ಭಾಗವತ್
ಮೋಹನ್ ಭಾಗವತ್   

ಇಂಫಾಲ್‌: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ನಾಳೆ (ನವೆಂಬರ್ 20) ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಭಾಗವತ್‌ ಅವರು ಮೂರು ದಿನಗಳ ಭೇಟಿ ವೇಳೆ ನಾಗರಿಕರು, ಉದ್ಯಮಿಗಳು ಹಾಗೂ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಆರ್‌ಎಸ್‌ಎಸ್‌ ರಾಜ್ಯ ಕಾರ್ಯದರ್ಶಿ ತರುಣ್‌ ಕುಮಾರ್‌ ಶರ್ಮಾ ಹೇಳಿದ್ದಾರೆ.

'ನಮ್ಮ ಸರಸಂಘಚಾಲಕರು ಆರ್‌ಎಸ್‌ಎಸ್‌ನ ಶತಮಾನೋತ್ಸವ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಗುವಾಹಟಿಯಿಂದ ನವೆಂಬರ್‌ 20ರಂದು ಬರಲಿರುವ ಅವರು, ನವೆಂಬರ್‌ 22ಕ್ಕೆ ವಾಪಸ್‌ ಆಗಲಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಎರಡು ವರ್ಷಗಳ ಹಿಂದೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಭಾಗವತ್‌ ಅವರು ಮಣಿಪುರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಅವರು 2022ರಲ್ಲಿ ಕೊನೆಯದಾಗಿ ಇಲ್ಲಿಗೆ ಬಂದಿದ್ದರು ಎಂದು ಆರ್‌ಎಸ್‌ಎಸ್‌ನ ಮತ್ತೊಬ್ಬರು ಹೇಳಿದ್ದಾರೆ.

ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವೆ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ 260 ಮಂದಿ ಮೃತಪಟ್ಟು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಎನ್‌. ಬಿರೇನ್‌ ಸಿಂಗ್‌ ಅವರು ಇದೇ ವರ್ಷ ಫೆಬ್ರುವರಿಯಲ್ಲಿ ರಾಜೀನಾಮೆ ಸಲ್ಲಿಸಿದ ನಂತರ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.