
ಮೋಹನ್ ಭಾಗವತ್
ನವದೆಹಲಿ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್) ಬದಲಾಗಿಲ್ಲ. ಆದರೆ ಕಾಲಕ್ಕೆ ಅನುಗುಣವಾಗಿ ವಿಕಾಸಗೊಳ್ಳುತ್ತಿದೆ’ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಭಾನುವಾರ ಹೇಳಿದರು.
ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣದ ಕಥಾಹಂದರವನ್ನು ಹೊಂದಿರುವ ‘ಶತಕ್’ ಸಿನಿಮಾದ ಹಾಡು ಬಿಡುಗಡೆಗಾಗಿ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಘವು ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದು ವಿಕಾಸಗೊಳ್ಳುತ್ತಾ ಹೊಸ ರೂಪ ತಳೆಯುವುದನ್ನು ಜನರು ಬದಲಾವಣೆ ಎಂದುಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಸಂಘವು ಬದಲಾಗಿಲ್ಲ; ಹಂತಹಂತವಾಗಿ ಬೆಳೆಯುತ್ತಿದೆ’ ಎಂದರು.
‘ಬೀಜವೊಂದು ಚಿಗುರಿ ಹೆಮ್ಮರವಾಗಿ ಬೆಳೆದು, ಹೂವು–ಹಣ್ಣುಗಳನ್ನು ನೀಡುವಂತೆ ಸಂಘವೂ ಬೆಳೆಯುತ್ತಿದೆ’ ಎಂದು ಹೇಳಿದರು.
‘ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರು ಹುಟ್ಟುತ್ತಲೇ ದೇಶಭಕ್ತ. ಅವರು ತಮ್ಮ ಇಡೀ ಜೀವನವನ್ನು ದೇಶಸೇವೆಗಾಗಿ ಮುಡಿಪಿಟ್ಟಿದ್ದರು. ಸಂಘ ಮತ್ತು ಹೆಡಗೇವಾರ್ ಎರಡೂ ಸಮನಾರ್ಥಕ ಪದಗಳು’ ಎಂದು ಪ್ರತಿಪಾದಿಸಿದರು.
‘ಪ್ಲೇಗ್ ರೋಗದಿಂದ ತಂದೆ–ತಾಯಿ ನಿಧನರಾದಾಗ ಹೆಡಗೇವಾರ್ ಅವರಿಗೆ ಕೇವಲ 11 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂಥ ಆಘಾತ ಎದುರಾಗಿದ್ದರೂ ಅವರು ಎದೆಗುಂದಲಿಲ್ಲ’ ಎಂದರು.
ಗಾಯಕ ಸುಖ್ವಿಂದರ್ ಸಿಂಗ್, ನಿರ್ದೇಶಕ ಆಶಿಶ್ ಮಾಲ್, ಸಹ ನಿರ್ಮಾಪಕ ಆಶಿಶ್ ತಿವಾರಿ, ಆರ್‌ಎಸ್‌ಎಸ್ ಪದಾಧಿಕಾರಿ ಬೈಯಾಜಿ ಜೋಶಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.