ADVERTISEMENT

ಭಾರತ ಕುರಿತ ತಪ್ಪುಗ್ರಹಿಕೆ ನಿವಾರಣೆಗೆ ಬೃಹತ್ ಕಾರ್ಯಕ್ರಮ: ಹೊಸಬಾಳೆ

‘ಜಾಗತಿಕ ಸಮುದಾಯಕ್ಕೆ ವಾಸ್ತವಾಂಶಗಳಿಂದ ಕೂಡಿದ ನೈಜ ಚಿತ್ರಣ ನೀಡುವ ಪ್ರಯತ್ನ’

ಪಿಟಿಐ
Published 13 ಮಾರ್ಚ್ 2022, 20:16 IST
Last Updated 13 ಮಾರ್ಚ್ 2022, 20:16 IST
ದತ್ತಾತ್ರೇಯ ಹೊಸಬಾಳೆ 
ದತ್ತಾತ್ರೇಯ ಹೊಸಬಾಳೆ    

ಅಹಮದಾಬಾದ್: ‘ದೇಶದ ಬಗ್ಗೆ ಜಾಗತಿಕವಾಗಿ ತಪ್ಪು ಮಾಹಿತಿಯನ್ನೆ ಪ್ರಚುರಪಡಿಸಲಾಗುತ್ತಿದೆ. ಈ ತಪ್ಪುಕಲ್ಪನೆಗಳನ್ನು ಹೋಗಲಾಡಿಸಿ, ಭಾರತದ ಬಗ್ಗೆ ವಾಸ್ತವ ಸಂಗತಿಗಳಿಂದ ಕೂಡಿದ ವಿವರಣೆ ನೀಡಲು ಸಂಘ ನಿರ್ಧರಿಸಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ತೇಯ ಹೊಸಬಾಳೆ ಭಾನುವಾರ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ನ ಮೂರು ದಿನಗಳ ವಾರ್ಷಿಕ ಸಮಾವೇಶ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ದ ಹಿನ್ನೆಲೆಯಲ್ಲಿರುವ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

'ಈ ಉದ್ದೇಶಕ್ಕಾಗಿ ಸಂಶೋಧಕರು, ಲೇಖಕರ ನೆರವು ಪಡೆಯಲಾಗುವುದು. ಭಾರತೀಯ ಸಮಾಜ, ಹಿಂದೂ ಸಮುದಾಯದ ಇತಿಹಾಸ, ಸಂಸ್ಕೃತಿ ಹಾಗೂ ಜೀವನಶೈಲಿ ಕುರಿತು ಜಗತ್ತಿಗೆ ಹಾಗೂ ದೇಶೀಯವಾಗಿ ನೈಜಚಿತ್ರಣ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಮೂರು ದಿನಗಳ ಸಮಾವೇಶದಲ್ಲಿ ಚರ್ಚಿಸಲಾಗುವುದು’ ಎಂದೂ ಅವರು ಹೇಳಿದರು.

ADVERTISEMENT

‘2025ರಲ್ಲಿ ಆರ್‌ಎಸ್‌ಎಸ್‌ಗೆ ಶತಮಾನೋತ್ಸವ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಂಘದ ನೆಲೆಯನ್ನು ವಿಸ್ತರಿಸಲು ಕಾರ್ಯಕ್ರಮ ರೂಪಿಸಲಾಗುವುದು. ಸಂಖ್ಯಾ ದೃಷ್ಟಿಯಿಂದ ಮಾತ್ರವಲ್ಲ, ರಾಷ್ಟ್ರೀಯತೆ ಹಾಗೂ ಏಕತೆಯಂತಹ ವಿಚಾರಗಳ ತಳಹದಿಯಲ್ಲಿ ಸಂಘದ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸಲಾಗಿದೆ’ ಎಂದೂ ಹೇಳಿದರು.

ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಮಿತಿಯಾಗಿರುವ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ ಕಾರ್ಯಕ್ರಮದಲ್ಲಿ 1,252 ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.