ADVERTISEMENT

ಲೋಕಸಭಾ ಚುನಾವಣೆ: ಮೋದಿ ಬೆಂಬಲಿಸಲು ಶಿಯಾ ಮುಸ್ಲಿಮರ ನಿರ್ಧಾರ

ರಾಷ್ಟ್ರೀಯ ಶಿಯಾ ಸಮಾಜದ ಮುಖ್ಯಸ್ಥ ಹೇಳಿಕೆ

ಪಿಟಿಐ
Published 25 ಜೂನ್ 2018, 11:40 IST
Last Updated 25 ಜೂನ್ 2018, 11:40 IST
ಬುಕ್ಕಲ್ ನವಾಬ್
ಬುಕ್ಕಲ್ ನವಾಬ್   

ಲಖನೌ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಶಿಯಾ ಮುಸ್ಲಿಮರು ನಿರ್ಧರಿಸಿದ್ದಾರೆ.

‘ಮೋದಿ ಅವರನ್ನು ಬೆಂಬಲಿಸುವುದರ ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದರ ಪರವಾಗಿ ಇದ್ದೇವೆ’ ಎಂದು ರಾಷ್ಟ್ರೀಯ ಶಿಯಾ ಸಮಾಜದ (ಆರ್‌ಎಸ್‌ಎಸ್) ಮುಖ್ಯಸ್ಥ ಬುಕ್ಕಲ್ ನವಾಬ್ ಹೇಳಿದ್ದಾರೆ. ಇವರು ಉತ್ತರ ಪ್ರದೇಶದ ಬಿಜೆಪಿ ಬೆಂಬಲಿತ ಪರಿಷತ್ ಸದಸ್ಯ.

‘ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಸ್ಥಾನ ಅಲಂಕರಿಸುವುದನ್ನು ಸಮುದಾಯ ಬಯಸುತ್ತದೆ. ಬಿಜೆಪಿಯನ್ನು ಹೊರತುಪಡಿಸಿದರೆ ಬೇರಾವ ಪಕ್ಷವೂ ಶಿಯಾ ಮುಸ್ಲಿಮರ ಬಗ್ಗೆ ಕಾಳಜಿ ಹೊಂದಿಲ್ಲ’ ಎಂದು ಅವರು ಹೇಳಿದ್ದಾರೆ. ಮುಸ್ಲಿಮರ ಪೈಕಿ ಶಿಯಾ ಸಮುದಾಯ ಶೇ 18ರಷ್ಟು ಜನಸಂಖ್ಯೆ ಹೊಂದಿದೆ.

ADVERTISEMENT

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯಲ್ಲಿ ಶಿಯಾ ಸಮುದಾಯ ಏರ್ಪಡಿಸುವ ಮೆರವಣಿಗೆ ಮೇಲೆ 20 ವರ್ಷಗಳಿಂದ ಇದ್ದ ನಿರ್ಬಂಧವನ್ನು ತೆಗೆದುಹಾಕಿದ್ದರು ಎಂದು ನವಾಬ್ ನೆನಪಿಸಿಕೊಂಡರು.

‘ಶಿಯಾ ಸಮುದಾಯದ ಮುಖಂಡರಾದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ರಾಜ್ಯ ಸಚಿವ ಮೊಹ್ಸಿನ್ ರಾಜಾ, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಸೈಯದ್ ಹಸನ್ ರಿಜ್ವಿ, ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಹೈದರ್ ಅಬ್ಬಾಸ್ ಅವರಿಗೆ ಬಿಜೆಪಿ ಸರ್ಕಾರವು ಗೌರವಯುತ ಸ್ಥಾನಗಳನ್ನು ನೀಡಿದೆ’ ಎಂದು ಹೇಳಿದ್ದಾರೆ.

‘ಉತ್ತರಪ್ರದೇಶದಲ್ಲಿಈ ಹಿಂದಿನ ಬಿಎಸ್‌ಪಿ ಹಾಗೂ ಎಸ್‌ಪಿ ಸರ್ಕಾರಗಳು ಶಿಯಾ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಿವೆ. ಮಾಯಾವತಿ ಸರ್ಕಾರ ನನ್ನನ್ನು ಜೈಲಿನಲ್ಲಿಟ್ಟಿತ್ತು’ ಎಂದು ನವಾಜ್ ಆರೋಪಿಸಿದ್ದಾರೆ.

ಆರ್‌ಎಸ್‌ಎಸ್‌ ಎಂಬುದು ಹಿಂದೂ ರಾಷ್ಟ್ರೀಯವಾದಿ ಗುಂಪನ್ನು ಪ್ರತಿನಿಧಿಸುತ್ತದೆಯಲ್ಲವೇ ಎಂಬ ಪ್ರಶ್ನೆಗೆ, ‘ಇದು ಮತ್ತೊಂದು ಅವತಾರ’ ಎಂದು ನವಾಬ್ ಉತ್ತರಿಸಿದರು.

2016ರಲ್ಲಿ ರಾಷ್ಟ್ರೀಯ ಶಿಯಾ ಸಮಾಜದ ಪರಿಕಲ್ಪನೆ ಮೂಡಿತು. ಇದರಡಿ ಕಳೆದ ವರ್ಷ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನವಾಬ್ ಅವರು 2017ರಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದಿದ್ದರು. ಆದರೆ ಯೋಗಿ ಆದಿತ್ಯನಾಥ ಅವರಿಗೆ ದಾರಿ ಮಾಡಿಕೊಡುವ ಉದ್ದೇಶದಿಂದ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದರು. ಪಕ್ಷವು ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.