ಮುಂಬೈ : ರೂಪಾಯಿ ಮೌಲ್ಯವು ಸೋಮವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು 55 ಪೈಸೆಗಳಷ್ಟು ಕುಸಿದಿದೆ. ವಹಿವಾಟಿನ ಕೊನೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 87.17ಕ್ಕೆ ತಲುಪಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ, ಮೆಕ್ಸಿಕೊ ಮತ್ತು ಚೀನಾವನ್ನು ಗುರಿಯಾಗಿಸಿಕೊಂಡು ಸುಂಕ ಹೇರಿರುವುದು ಜಾಗತಿಕ ಮಾರುಕಟ್ಟೆ ವಹಿವಾಟುಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿದೆ.
ಟ್ರಂಪ್ ಅವರ ಕ್ರಮದಿಂದಾಗಿ ಸುಂಕ ಸಮರವು ಹೆಚ್ಚಾಗುವ ಭೀತಿಯನ್ನು ಸೃಷ್ಟಿಸಿದೆ. ಹೀಗಾಗಿ, ಅಮೆರಿಕದ ಡಾಲರ್ ಸೂಚ್ಯಂಕವು ಏರಿಕೆ ಕಂಡಿದೆ. ಇದರ ಪರಿಣಾಮವಾಗಿ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿತು ಎಂದು ಕರೆನ್ಸಿ ವಿನಿಮಯ ಮಾರುಕಟ್ಟೆ ವರ್ತಕರು ಹೇಳಿದ್ದಾರೆ.
ಸೋಮವಾರದ ವಹಿವಾಟಿನ ನಡುವಿನಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 87.29ರ ಮಟ್ಟಕ್ಕೂ ಕುಸಿದಿತ್ತು. ನಂತರ ಅದು ತುಸು ಚೇತರಿಕೆ ಕಂಡುಕೊಂಡಿತು. ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 86.62ಕ್ಕೆ ತಲುಪಿತ್ತು.
ವಿದೇಶಿ ಹೂಡಿಕೆದಾರರು ದೇಶದ ಮಾರುಕಟ್ಟೆಗಳಿಂದ ಹಣವನ್ನು ನಿರಂತರವಾಗಿ ಹಿಂದಕ್ಕೆ ತೆಗೆದುಕೊಳ್ಳುತ್ತಿರುವುದು ಮತ್ತು ತೈಲ ಆಮದುದಾರರು ಡಾಲರ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇರಿಸುತ್ತಿರುವ ಕಾರಣದಿಂದಾಗಿ ಅಮೆರಿಕದ ಕರೆನ್ಸಿಯು ವಿದೇಶಿ ಮಾರುಕಟ್ಟೆಗಳಲ್ಲಿ ಬಲಗೊಳ್ಳುತ್ತಿದೆ. ಇವುಗಳಿಂದಾಗಿ ರೂಪಾಯಿ ಮೌಲ್ಯದ ಮೇಲೆ ಒತ್ತಡ ಸೃಷ್ಟಿಯಾಗಿದೆ ಎಂದು ವರ್ತಕರು ಹೇಳಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಗಳಿಂದ ಶನಿವಾರ ಒಟ್ಟು ₹1,327 ಕೋಟಿ ಹಿಂಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.