ADVERTISEMENT

ಕೊರೊನಾ ವೈರಸ್ ಬಿಕ್ಕಟ್ಟಿನ ಬಗ್ಗೆ ಗ್ರಾಮೀಣ ಭಾರತೀಯರು ಏನಂತಾರೆ?

ಪಿಟಿಐ
Published 22 ಡಿಸೆಂಬರ್ 2020, 15:35 IST
Last Updated 22 ಡಿಸೆಂಬರ್ 2020, 15:35 IST
ಸಮೀಕ್ಷೆ (ರಾಯಿಟರ್ಸ್ ಸಂಗ್ರಹ ಚಿತ್ರ)
ಸಮೀಕ್ಷೆ (ರಾಯಿಟರ್ಸ್ ಸಂಗ್ರಹ ಚಿತ್ರ)   

ನವದೆಹಲಿ: ಶೇ 51ರಷ್ಟು ಮಂದಿ ಗ್ರಾಮೀಣ ಭಾರತೀಯರು ಕೊರೊನಾ ವೈರಸ್ ಬಿಕ್ಕಟ್ಟು ‘ಚೀನಾದ ಸಂಚು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ 44ರಷ್ಟು ಕೋವಿಡ್–19 ಲಸಿಕೆ ವೆಚ್ಚ ಪಾವತಿಸಲು ಸಿದ್ಧರಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

‘ಗಾಂವ್ ಕನೆಕ್ಷನ್‌’ ಸಂಸ್ಥೆಯು 16 ರಾಜ್ಯಗಳ (ಒಂದು ಕೇಂದ್ರಾಡಳಿತ ಪ್ರದೇಶವೂ ಸೇರಿದೆ) 60 ಜಿಲ್ಲೆಗಳ 6,040 ಗ್ರಾಮೀಣ ಭಾಗದ ಜನರನ್ನು ಸಮೀಕ್ಷೆಗೆ ಒಳಪಡಿಸಿದೆ. ಈ ಪೈಕಿ ಶೇ 36ರಷ್ಟು ಮಂದಿ ಕೋವಿಡ್–19 ಲಸಿಕೆಗೆ ವೆಚ್ಚ ಪಾವತಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಶೇ 20ರಷ್ಟು ಮಂದಿ ಲಸಿಕೆಗೆ ಹಣ ಪಾವತಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

ಕೋವಿಡ್ ಲಸಿಕೆಯ ವೆಚ್ಚ ಪಾವತಿಸಲು ಸಿದ್ಧ ಎಂದು ಹೇಳಿದವರ ಪೈಕಿ ಮೂರನೇ ಎರಡರಷ್ಟು ಮಂದಿ ₹500ರ ವರೆಗೆ ಲಸಿಕೆಯ ಎರಡು ಡೋಸ್‌ಗಳಿಗೆ ಪಾವತಿಸಬಲ್ಲೆವು ಎಂದು ಹೇಳಿದ್ದಾರೆ.

ಚೀನಾ ಸಂಚು: ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 51ರಷ್ಟು ಮಂದಿ ಕೊರೊನಾ ವೈರಸ್ ಬಿಕ್ಕಟ್ಟು ‘ಚೀನಾದ ಸಂಚು’ ಎಂದೇ ಹೇಳಿದ್ದಾರೆ. ಶೇ 18ರಷ್ಟು ಮಂದಿ ಇದು ಸರ್ಕಾರದ ವೈಫಲ್ಯ ಎಂದೂ ಹೇಳಿದ್ದಾರೆ. ಶೇ 20ರಷ್ಟು ಮಂದಿ ಇದು ‘ದೇವರ ಆಟ’ ಎಂದು ಭಾವಿಸಿದ್ದಾರೆ. ಶೇ 22ರಷ್ಟು ಮಂದಿ ಜನರ ನಿರ್ಲಕ್ಷ್ಯದ ಬಗ್ಗೆ ದೂರಿದ್ದರೆ, ಶೇ 18ರಷ್ಟು ಜನ ಅಭಿಪ್ರಾಯ ಹಂಚಿಕೊಂಡಿಲ್ಲ.

ಡಿಸೆಂಬರ್ 1ರಿಂದ 10ರ ನಡುವಣ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಕೋವಿಡ್ ಅಂಕಿಅಂಶ ಆಧರಿಸಿ ರಾಜ್ಯಗಳನ್ನು, ಪ್ರದೇಶಗಳನ್ನು ಸಮೀಕ್ಷೆಗೆ ಆಯ್ದುಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ದೇಶದ ಉತ್ತರ ಭಾಗದಲ್ಲಿ ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ, ಪಂಜಾಬ್, ಜಮ್ಮು–ಕಾಶ್ಮೀರ ಮತ್ತು ಹರಿಯಾಣವನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿತ್ತು. ದಕ್ಷಿಣದಿಂದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶಗಳನ್ನು ಆಯ್ಕೆ ಮಾಡಿದ್ದರೆ ಪಶ್ಚಿಮದಿಂದ ಗುಜರಾತ್, ಮಧ್ಯಪ್ರದೇಶವನ್ನು, ಈಶಾನ್ಯದಿಂದ ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಅರುಣಾಚಲ ಪ್ರದೇಶವನ್ನು ಆಯ್ಕೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.