
ನವದೆಹಲಿ: ತನ್ನ ದೇಶದ ಶಸ್ತ್ರಾಸ್ತ್ರ ಹಾಗೂ ರಕ್ಷಣಾ ಉಪಕರಣಗಳ ನಿರ್ವಹಣೆಗಾಗಿ ಭಾರತದಲ್ಲಿಯೇ ಹಾರ್ಡ್‌ವೇರ್ ಹಾಗೂ ಬಿಡಿಭಾಗಗಳನ್ನು ತಯಾರಿಸಲು ರಷ್ಯಾ ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಧ್ಯೆ ನಡೆದ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ರಷ್ಯಾದಿಂದ ನಿರ್ಣಾಯಕ ಬಿಡಿಭಾಗಗಳು ಹಾಗೂ ಸಲಕರಣೆ ಪೂರೈಕೆಗೆ ದೀರ್ಘ ಅವಧಿ ಬೇಕಾಗುತ್ತಿದ್ದು, ಇದರಿಂದ ಆ ದೇಶದಿಂದ ಖರೀದಿಸುತ್ತಿದ್ದ ಸೇನಾ ಉಪಕರಣಗಳ ನಿರ್ವಹಣೆಯ ಮೇಲೂ ತೀವ್ರ ಪರಿಣಾಮ ಉಂಟಾಗುತ್ತಿದೆ ಎಂದು ಸೇನೆಯು ಬಹಳ ವರ್ಷಗಳಿಂದ ದೂರುತ್ತಿತ್ತು.
‘ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ತಂತ್ರಜ್ಞಾನ ಹಸ್ತಾಂತರ ಮಾಡಿಕೊಂಡು, ರಷ್ಯಾ ಮೂಲದ ಶಸ್ತ್ರಾಸ್ತ್ರಗಳು ಹಾಗೂ ಸೇನಾ ಉಪಕರಣಗಳ ಬಿಡಿಭಾಗಗಳ ತಯಾರಿಕಾ ಘಟಕಗಳನ್ನು ಜಂಟಿಯಾಗಿ ಸ್ಥಾಪಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ’ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತೀಯ ಸೇನೆಗೆ ಅಗತ್ಯವಾದ ಉತ್ಪನ್ನಗಳನ್ನು ಪೂರೈಸಿ, ಸಮಾನ ಸ್ನೇಹಿಯಾದ ಮೂರನೇ ದೇಶಗಳಿಗೂ ರಫ್ತು ಮಾಡಲು ಜಂಟಿ ಸಹಭಾಗಿತ್ವದಲ್ಲಿ ಘಟಕ ಸ್ಥಾಪಿಸಲು ಸಭೆಯಲ್ಲಿ ಸಮ್ಮತಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಷ್ಯಾ ರಕ್ಷಣಾ ಸಚಿವ ಆಂಡ್ರೆ ಬೆಲೊಸೊ ನಡುವೆ ಗುರುವಾರ ನಡೆದ ಸಭೆಯಲ್ಲೂ ದ್ವಿಪಕ್ಷೀಯ ರಕ್ಷಣಾ ಸಹಕಾರ ವೃದ್ಧಿಗೆ ಒಪ್ಪಿಗೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.