ADVERTISEMENT

ಶಬರಿಗಿರಿ: ಭಕ್ತರ ಅಬ್ಬರಕ್ಕೆ ಕುಸಿದ ನಾರಿ, ಇನ್ನೂ ತಗ್ಗದ ಪ್ರತಿಭಟನಕಾರರ ಆಕ್ರೋಶ

ನಾಲ್ವರು ಮಹಿಳೆಯರಿಗೆ ತಡೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 20:00 IST
Last Updated 21 ಅಕ್ಟೋಬರ್ 2018, 20:00 IST
ಶಬರಿಮಲೆಯಲ್ಲಿ ಭಕ್ತರ ಪ್ರತಿಭಟನೆ ಐದನೇ ದಿನವೂ ಮುಂದುವರಿಯಿತು --– -ಪಿಟಿಐ ಚಿತ್ರ
ಶಬರಿಮಲೆಯಲ್ಲಿ ಭಕ್ತರ ಪ್ರತಿಭಟನೆ ಐದನೇ ದಿನವೂ ಮುಂದುವರಿಯಿತು --– -ಪಿಟಿಐ ಚಿತ್ರ   

ಶಬರಿಮಲೆ: ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಮುಂದಾಗಿದ್ದ ಆಂಧ್ರ ಪ್ರದೇಶ ನಾಲ್ವರು ಮಹಿಳೆಯರನ್ನು ಪ್ರತಿಭಟನಕಾರರು ಭಾನುವಾರ ತಡೆದಿದ್ದಾರೆ. ಇದರೊಂದಿಗೆ ಅಯ್ಯಪ್ಪ ದೇಗುಲ ಪ್ರವೇಶಿಸುವ ಮಹಿಳೆಯರ ಬಯಕೆ ಐದನೇ ದಿನವೂ ಈಡೇರಲಿಲ್ಲ.

ಪೊಲೀಸರ ರಕ್ಷಣೆ ಇಲ್ಲದೆ ಶಬರಿಮಲೆ ಏರಿದ್ದ ಆಂಧ್ರ ಪ್ರದೇಶದ 47 ವರ್ಷದ ಬಾಲಮ್ಮ ಎಂಬ ಮಹಿಳೆ ಪ್ರತಿಭಟನಕಾರರ ದಾಳಿಯಿಂದ ಆಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ. ಅವರೊಂದಿಗೆ ಬಂದಿದ್ದ ಇತರ ಮೂವರು ಮಹಿಳಾ ಯಾತ್ರಿಗಳನ್ನು ಮಾರ್ಗಮಧ್ಯೆ ತಡೆದು ಮರಳಿ ಕಳಿಸಲಾಯಿತು.

ತಿಂಗಳ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಬಾಗಿಲು ತೆರೆದ ನಂತರ ಒಬ್ಬ ಮಹಿಳೆಗೂ ದೇವಸ್ಥಾನ ಪ್ರವೇಶಿಸಲು ಅವಕಾಶ ದೊರೆತಿಲ್ಲ. ಇಲ್ಲಿಯವರೆಗೆ ಹತ್ತು ಮಹಿಳೆಯರು ದೇಗುಲ ಪ್ರವೇಶ ಯತ್ನಕ್ಕೆ ಅಯ್ಯಪ್ಪ ಭಕ್ತರು ಮತ್ತು ಪ್ರತಿಭಟನಕಾರರು ತಡೆಯೊಡ್ಡಿದ್ದಾರೆ.

ADVERTISEMENT

ಕುಸಿದು ಬಿದ್ದ ಮಹಿಳೆ: ಬಾಲಮ್ಮ ಪೊಲೀಸರ ಬೆಂಗಾವಲು ಇಲ್ಲದೆ ಬೆಟ್ಟ ಏರಿದ ಕಾರಣ ಯಾರ ಗಮನಕ್ಕೂ ಬಂದಿರಲಿಲ್ಲ. ಪ್ರತಿಭಟನಕಾರರು ಅವರ ಗುರುತಿನ ಚೀಟಿ ಪರೀಕ್ಷಿಸಿದಾಗ ಅವರಿಗೆ 50 ವರ್ಷ ತುಂಬಿಲ್ಲ ಎಂದು ತಿಳಿಯಿತು.

ರೊಚ್ಚಿಗೆದ್ದ ಗುಂಪಿನ ಅಬ್ಬರಕ್ಕೆ ಬೆಚ್ಚಿಬಿದ್ದ ಮಹಿಳೆ ಪ್ರಜ್ಞೆತಪ್ಪಿ ಕುಸಿದು ಬಿದ್ದರು. ತಕ್ಷಣ ಅವರನ್ನು ಪಂಪಾ ಆಸ್ಪತ್ರೆಗೆ ಸಾಗಿಸಲಾಯಿತು.

ಮಹಿಳೆಯರಿಗೆ ಬೆದರಿಕೆ

ಆಂಧ್ರ ಪ್ರದೇಶದ ಯಾತ್ರಿಗಳ ತಂಡದ ಜತೆ ಬಂದಿದ್ದ ವಾಸಂತಿ ಮತ್ತು ಆದಿಶೇಷಿ ಎಂಬ 40 ವರ್ಷ ಆಸುಪಾಸಿನ ಮಹಿಳೆಯರಿಬ್ಬರನ್ನು ಪ್ರತಿಭಟನಕಾರರು ಪಂಪಾದಲ್ಲಿಯೇ ತಡೆದು ವಾಪಸ್‌ ಕಳಿಸಿದರು.

ಇಬ್ಬರನ್ನೂ‘ಕಂಟ್ರೋಲ್‌ ರೂಂ’ಗೆ ಕರೆದೊಯ್ದ ಪೊಲೀಸರು ನಂತರ ನಿಲಕ್ಕಲ್‌ನಲ್ಲಿ ಅವರ ಬಸ್‌ಗೆ ಹತ್ತಿಸಿದರು. ಶಬರಿಮಲೆಯಲ್ಲಿ ಬಿಗುವಿನ ಪರಿಸ್ಥಿತಿ ಮತ್ತು ಇಲ್ಲಿಯ ಸಂಪ್ರದಾಯ ಗೊತ್ತಿರಲಿಲ್ಲ ಎಂದು ಆ ಮಹಿಳೆಯರು ಹೇಳಿದ್ದಾರೆ. ದೇಗುಲದ ಬಳಿ ಬೀಡುಬಿಟ್ಟಿರುವ ಭಕ್ತರು ಗುರುತಿನ ಚೀಟಿ ಪರೀಕ್ಷಿಸಿ, 50 ವರ್ಷ ತುಂಬಿದ ಮಹಿಳೆಯರನ್ನು ಮಾತ್ರ ದೇಗುಲದೊಳಗೆ ಬಿಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.