
ಶಬರಿಮಲೆ
ಕೊಲ್ಲಂ: ಶಬರಿಮಲೆ ಚಿನ್ನ ಕಳವಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಿರುವಾಂಕೂರು ದೇವಸ್ವ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಮತ್ತು ಸಿಪಿಎಂ ನಾಯಕ ಪಿ.ಪದ್ಮಕುಮಾರ್ ಅವರಿಗೆ ಇಲ್ಲಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ಬಂಧನವಾದ 90 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ವಿಫಲವಾದ ಕಾರಣ, ಕೊಲ್ಲಂ ವಿಚಕ್ಷಣ ನ್ಯಾಯಾಲಯದ ನ್ಯಾಯಾಧೀಶ ಮೋಹಿತ್ ಸಿ.ಎಸ್ ಅವರು ಜಾಮೀನು ಮಂಜೂರು ಮಾಡಿದರು.
ಶ್ರೀಕೋವಿಲ್ ಬಾಗಿಲು ಚೌಕಟ್ಟಿನ ಚಿನ್ನ ಕಳವು ಪ್ರಕರಣದಲ್ಲಿ ಪದ್ಮಕುಮಾರ್ ಅವರಿಗೆ ಜಾಮೀನು ದೊರೆತಿದೆ. ಆದರೆ ದ್ವಾರಪಾಲಕ ಮೂರ್ತಿಗಳ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಅವರು ಜಾಮೀನು ಲಭ್ಯವಾಗದ ಕಾರಣ ಅವರು ಜೈಲಿನಲ್ಲೇ ಇರಬೇಕಾಗುತ್ತದೆ.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾರ್ಚ್ 31ರ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಎಸ್‌ಐಟಿ ನ್ಯಾಯಾಲಯಕ್ಕೆ ಇತ್ತೀಚೆಗೆ ತಿಳಿಸಿದೆ.
ಪ್ರತೀಕಾರಕ್ಕಾಗಿ ಬಂಧನ
ರಾಜೀವಾರು 2018ರಲ್ಲಿ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ತಾವು ವ್ಯಕ್ತಪಡಿಸಿದ್ದ ನಿಲುವಿಗೂ ಮತ್ತು ಚಿನ್ನ ಕಳವು ಪ್ರಕರಣದಲ್ಲಿ ತಮ್ಮ ಬಂಧನಕ್ಕೂ ಸಂಬಂಧವಿದೆ ಎಂದು ಶಬರಿಮಲೆ ತಂತ್ರಿ ಕಂದರಾರು ರಾಜೀವಾರು ಅವರು ಹೇಳಿದ್ದಾರೆ. ಆ ಸಮಯದಲ್ಲಿ ತಮ್ಮ ನಿಲುವು ಅನೇಕರಿಗೆ ಕಳವಳಕ್ಕೆ ಕಾರಣವಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ರಾಜೀವಾರು ಅವರು ದ್ವಾರಪಾಲಕ ಮೂರ್ತಿಗಳ ಚಿನ್ನ ಕಳವು ಪ್ರಕರಣದ 16ನೇ ಆರೋಪಿ ಮತ್ತು ಶ್ರೀಕೋವಿಲ್ ಬಾಗಿಲು ಚೌಕಟ್ಟಿನ ಚಿನ್ನ ಕಳವು ಪ್ರಕರಣದಲ್ಲಿ 13ನೇ ಆರೋಪಿಯಾಗಿದ್ದಾರೆ. ಇವರಿಗೆ ಇತ್ತೀಚೆಗೆ ಜಾಮೀನು ದೊರೆತಿದೆ. ‘ಸುಪ್ರೀಂ ಕೋರ್ಟ್ ಆದೇಶದ ನಂತರ ಕೆಲವು ನಿರ್ದಿಷ್ಟ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ದೇಗುಲದ ಪದ್ಧತಿ ಮತ್ತು ಆಚರಣೆಯ ಉಳಿವಿಗಾಗಿ ಕಠಿಣ ನಿರ್ಧಾರ ಕೈಗೊಂಡಿದ್ದೆ. ರಾಜಕೀಯ ಹಸ್ತಕ್ಷೇಪವನ್ನು ನಿರಾಕರಿಸಿದ್ದೆ’ ಎಂದು ತಂತ್ರಿ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.