
ಕೊಚ್ಚಿ/ನವದೆಹಲಿ: ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ 21 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಇ.ಡಿ ದಾಳಿ ನಡೆಸಿದೆ.
ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟಿ ಅವರ ಬೆಂಗಳೂರಿನಲ್ಲಿರುವ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಕೇರಳ ಪೊಲೀಸ್ ದಾಖಲಿಸಿದ ಎಫ್‌ಐಆರ್ ಆಧಾರದಲ್ಲಿ ಇ.ಡಿ. ಇತ್ತೀಚೆಗೆ ಪಿಎಂಎಲ್‌ಎ ಪ್ರಕರಣ ದಾಖಲಿಸಿತ್ತು.
ರಾಜಕೀಯವಾಗಿ ಸೂಕ್ಷ್ಮವಾದ ಈ ಪ್ರಕರಣವನ್ನು ಕೇರಳ ಹೈಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ರಾಜ್ಯ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದೆ.
ಈ ತನಿಖೆಯು ಅಧಿಕಾರಿಗಳ ದುಷ್ಕೃತ್ಯ, ಆಡಳಿತಾತ್ಮಕ ಲೋಪಗಳು ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದ ವಿವಿಧ ಕಲಾಕೃತಿಗಳಿಂದ ಚಿನ್ನವನ್ನು ದುರುಪಯೋಗಪಡಿಸಿಕೊಳ್ಳಲು ಕ್ರಿಮಿನಲ್ ಪಿತೂರಿ ಸೇರಿದಂತೆ ಅಕ್ರಮಗಳು ನಡೆದಿವೆ.
ಎಸ್‌ಐಟಿ ಮತ್ತು ಇಡಿ ನಡೆಸುತ್ತಿರುವ ತನಿಖೆಯು, ದ್ವಾರ ರಕ್ಷಕ ದೇವತೆ ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರದ ತಟ್ಟೆಗಳು ಮತ್ತು ದೇವಾಲಯದ ಗರ್ಭಗುಡಿ ದ್ವಾರ ಚೌಕಟ್ಟಿನಿಂದ ಚಿನ್ನ ಕಳೆದುಹೋಗಿದ್ದಕ್ಕೆ ಸಂಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.