ಕೊಚ್ಚಿ: ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ ತೂಕ ಕಡಿಮೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇಣಿಗೆ ನೀಡಿದ್ದ ವ್ಯಕ್ತಿಯು ಯಾವುದೇ ಶಾಶ್ವತ ಆದಾಯದ ಮೂಲಗಳನ್ನು ಹೊಂದಿರಲಿಲ್ಲ ಎಂಬುದು ಗೊತ್ತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ವಿಚಕ್ಷಣ ವಿಭಾಗವು, ದೇವಾಲಯದಲ್ಲಿ ಹಲವಾರು ಚಿನ್ನ ಲೇಪಿತ ದೇಣಿಗೆ ಕೆಲಸಗಳನ್ನು ಪ್ರಾಯೋಜಿಸಿದ್ದ ಬೆಂಗಳೂರಿನ ಉದ್ಯಮಿಯು ಶಾಶ್ವತ ಆದಾಯವನ್ನು ಹೊಂದಿರಲಿಲ್ಲ ಎಂದು ಹೇಳಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ವಿಚಕ್ಷಣ ವಿಭಾಗವು, 2017ರಿಂದ 2025ರವರೆಗೆ ಉದ್ಯಮಿ ಉನ್ನಿಕೃಷ್ಣನ್ ಪೋಟಿ ಅವರ ಆದಾಯ ತೆರಿಗೆ ರಿಟರ್ನ್ಸ್ ದಾಖಲೆಗಳನ್ನು ಪರಿಶೀಲಿಸಿದೆ. ವರದಿಯನ್ನು ಕೇರಳ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದು, ನ್ಯಾಯಾಲಯವು ಪ್ರಾಥಮಿಕ ತನಿಖೆಗೆ ಆದೇಶಿಸಿದೆ.
ಹೈಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾಗಿರುವ ತನಿಖಾ ತಂಡವು ತನಿಖೆಯನ್ನು ಮುಂದುವರಿಸಿದೆ.
‘ಉನ್ನಿಕೃಷ್ಣನ್ ಅವರ ಯಾವುದೇ ಶಾಶ್ವತ ಆದಾಯದ ಮೂಲಗಳು ಬಹಿರಂಗಗೊಂಡಿಲ್ಲ. 2025–26ರ ಸಾಲಿನಲ್ಲಿ ಕಾಮಾಕ್ಷಿ ಎಂಟರ್‌ಪ್ರೈಸಸ್, ಇತರ ಸಾಮಾಜಿಕ ಹಾಗೂ ಸಮುದಾಯ ಸೇವೆ ಅಡಿಯಲ್ಲಿ ₹10.85 ಲಕ್ಷ ಹಣವನ್ನು ಉನ್ನಿಕೃಷ್ಣನ್ ಅವರ ಖಾತೆಗೆ ಜಮೆ ಮಾಡಿದೆ’ ಎಂದು ವರದಿ ಹೇಳಿದೆ.
ಶ್ರೀಕೋವಿಲ್ ದ್ವಾರದ ದುರಸ್ತಿ ಮತ್ತು ಚಿನ್ನದ ಲೇಪನವನ್ನು ಉನ್ನಿಕೃಷ್ಣನ್ ಕೊಡುಗೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ವಾಸ್ತವವಾಗಿ ಬಳ್ಳಾರಿಯ ಉದ್ಯಮಿ ಗೋವರ್ಧನ್ ಅವರು ಇದಕ್ಕೆ ಹಣ ನೀಡಿದ್ದಾರೆ ಎಂದು ಗೊತ್ತಾಗಿದೆ. ಅಲ್ಲದೇ ದ್ವಾರದ ಚೌಕಟ್ಟಿನ ಚಿನ್ನದ ಲೇಪನವನ್ನೂ ಉನ್ನಿಕೃಷ್ಣನ್ ಮಾಡಿದ್ದಾರೆ ಎನ್ನಲಾಗಿದದೆ. ಆದರೆ ಬೆಂಗಳೂರಿನ ಉದ್ಯಮಿ ಅಜಿತ್‌ಕುಮಾರ್ ಅವರು ಅದನ್ನು ಪ್ರಾಯೋಜಿಸಿದ್ದಾರೆ ಎಂಬುದು ಪತ್ತೆಯಾಗಿದೆ.
ಉನ್ನಿಕೃಷ್ಣನ್ ಅವರು ದೇವಸ್ಥಾನಕ್ಕೆ ಹಲವು ದೇಣಿಗೆಗಳನ್ನು ನೀಡಿದ್ದಾರೆ. ಶಬರಿಮಲೆಯಲ್ಲಿ ಅವರು ಕೈಗೊಂಡ ಎಲ್ಲಾ ಸೇವಾ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಗುಪ್ತಚರ ದಳವು ಶಿಫಾರಸು ಮಾಡಿದೆ.
ದ್ವಾರಪಾಲಕರ ಚಿನ್ನ ಲೇಪಿತ ಮೂರ್ತಿಗಳನ್ನು 2019ರಲ್ಲಿ ಉನ್ನಿಕೃಷ್ಣನ್ ಅವರಿಗೆ ಹಸ್ತಾಂತರಿಸುವ ವೇಳೆ ಟಿಡಿಬಿಯ 9 ಅಧಿಕಾರಿಗಳ ಲೋಪವೂ ಕಂಡುಬಂದಿದೆ. ಇದರೊಂದಿಗೆ ಮಂಡಳಿಯ ಇತರ ಅಧಿಕಾರಿಗಳ ಲೋಪಗಳು ಪತ್ತೆಯಾಗಿವೆ ಎಂಬುದನ್ನು ವರದಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.