ADVERTISEMENT

ಶಬರಿಮಲೆ ಚಿನ್ನ ಕಳವು ಪ್ರಕರಣ: ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬಂಧನ

ಪಿಟಿಐ
Published 1 ನವೆಂಬರ್ 2025, 7:19 IST
Last Updated 1 ನವೆಂಬರ್ 2025, 7:19 IST
   

 ಪತ್ತನ್ನಂತಿಟ್ಟ (ಕೇರಳ): ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್‌ಕುಮಾರ್‌ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ.

2019 ದೇವಾಲಯದ ಅಧಿಕಾರಿಯಾಗಿದ್ದ ಸುಧೀಶ್‌ ಅವರನ್ನು  ವಿಚಾರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ದೇಗುಲದ ದ್ವಾರಪಾಲಕ ಮೂರ್ತಿಗಳು ಚಿನ್ನಲೇಪಿತವಾಗಿದ್ದರೂ, ‌ಅದು ತಾಮ್ರದ ಹಾಳೆಗಳು ಎಂದು ಸುಧೀಶ್‌ ಅವರು ದೇಗುಲದ ದಾಖಲೆಗಳಲ್ಲಿ ದಾಖಲಿಸಿದ್ದರು.

ADVERTISEMENT

1990ರಿಂದಲೂ ಸುಧೀಶ್‌ ಅವರು ಶಬರಿಮಲೆ ದೇಗುಲದೊಂದಿಗೆ ನಂಟು ಹೊಂದಿದ್ದರು. ಗರ್ಭಗುಡಿಯ ಚಾವಣಿ ಮತ್ತು ದ್ವಾರಕಪಾಲಕ ಮೂರ್ತಿಗಳಿಗೆ 1998–99ರ ಅವಧಿಯಲ್ಲಿ ಚಿನ್ನಲೇಪನ ಮಾಡಿರುವ ಬಗ್ಗೆ ಅವರಿಗೆ ತಿಳಿದಿತ್ತು ಎಂದು ಮೂಲಗಳು ಹೇಳಿವೆ.

ಚಿನ್ನಲೇಪನ ಮಾಡಿಸುವ ಸಲುವಾಗಿ ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್‌ ಪೋಟಿ ಅವರಿಗೆ ದ್ವಾರಪಾಲಕ ಮೂರ್ತಿಗಳ ಕವಚಗಳನ್ನು 2019ರಲ್ಲಿ ಹಸ್ತಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಸುಧೀಶ್‌ ಅವರು ಚಿನ್ನದ ಕವಚಗಳನ್ನು ತಾಮ್ರದ ಕವಚಗಳೆಂದು ದಾಖಲಿಸಿದ್ದರು. ಇದರಿಂದಾಗಿ ಆರೋಪಿಗಳು ಚಿನ್ನದ ಕವಚಗಳನ್ನು ಕಳವು ಮಾಡಲು ಸಾಧ್ಯವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪೋಟಿ ಮತ್ತು ದೇಗುಲದ ಮಾಜಿ ಆಡಳಿತಾಧಿಕಾರಿ ಬಿ. ಮುರಾರಿಬಾಬು ಅವರು ಬಂಧನದಲ್ಲಿದ್ದಾರೆ.

ಪೋಟಿ ಆಪ್ತ ವಾಸುದೇವನ್ ಅವರನ್ನೂ ಎಸ್‌ಐಟಿ ವಿಚಾರಣೆ ನಡೆಸುತ್ತಿದೆ. ದ್ವಾರಪಾಲಕ ಮೂರ್ತಿಗಳನ್ನು ಇರಿಸಲು ಬಳಕೆಯಾಗುತ್ತಿದ್ದ ಹೆಚ್ಚುವರಿ ಪೀಠವು ವಾಸುದೇವನ್‌ ಅವರ ಸುಪರ್ದಿಯಲ್ಲಿತ್ತು. ಅದನ್ನು ಪೋಟಿ ‌ಅವರ ಸಂಬಂಧಿಕರ ಮನೆಯಿಂದ ಎಸ್‌ಐಟಿ ಕಳೆದ ತಿಂಗಳು ಜಪ್ತಿ ಮಾಡಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳಿಂದ ಚಿನ್ನ ಕಳವು ಪ್ರಕರಣ ಮತ್ತು ಶ್ರೀಕೋವಿಲ್(ಗರ್ಭಗುಡಿ) ಬಾಗಿಲಿನ ಚೌಕಟ್ಟಿನಿಂದ ಚಿನ್ನ ಕಳವು ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.