ADVERTISEMENT

ಶಬರಿಮಲೆ ಘಟನೆ ನೋವನ್ನುಂಟು ಮಾಡಿದೆ: ಕೇರಳ ಸಚಿವ

ಪಿಟಿಐ
Published 11 ಮಾರ್ಚ್ 2021, 16:30 IST
Last Updated 11 ಮಾರ್ಚ್ 2021, 16:30 IST
ಶಬರಿಮಲೆ
ಶಬರಿಮಲೆ   

ತಿರುವನಂತಪುರ: 2018ರಲ್ಲಿ ಶಬರಿಮಲೆ ದೇಗುಲಕ್ಕೆ ಮಹಿಳೆ ಪ್ರವೇಶಿಸಿರುವ ಘಟನೆಯು ತಮಗೆ ಅತೀವ ನೋವನ್ನುಂಟು ಮಾಡಿದೆ ಎಂದು ಕೇರಳದ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಗುರುವಾರ ಖೇದ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಎಡರಂಗ ಸರ್ಕಾರದ ಸಚಿವರ ಹೇಳಿಕೆಯು ಚುನಾವಣಾ ರಣತಂತ್ರವಾಗಿದ್ದು, 2018ರ ಘಟನೆ ಸಂಬಂಧ ಎಡರಂಗ ಸರ್ಕಾರವು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಆಗ್ರಹಿಸಿವೆ.

'2018ರಲ್ಲಿ ಶಬರಿಮಲೆಯಲ್ಲಿ ನಡೆದ ಘಟನೆಯು ನಮ್ಮೆಲ್ಲರಲ್ಲೂ ನೋವನ್ನುಂಟು ಮಾಡಿದೆ. ಇದು ಎಂದಿಗೂ ಸಂಭವಿಸಬಾರದಿತ್ತು. ಎಲ್ಲರಿಗೂ ನೋವುಂಟಾಗಿದೆ. ನನಗೂ ನೋವಾಗಿದೆ' ಎಂದು ಕಡಕಂಪಳ್ಳಿ ಸುರೇಂದ್ರನ್ ಹೇಳಿದರು.

ADVERTISEMENT

ಇದರ ವಿರುದ್ಧ ಹೇಳಿಕೆ ನೀಡಿರುವ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್, ಸಚಿವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಪವಿತ್ರ ಗಂಗಾ ನದಿಯಲ್ಲಿ ಐದು ಬಾರಿ ಸ್ನಾನ ಮಾಡಿ ಬಂದರೂ ಶಬರಿಮಲೆಯಲ್ಲಿ ಎಡರಂಗ ಸರ್ಕಾರ ತೋರಿಸಿದ ಕ್ರೌರ್ಯ ಹಾಗೂ ಅನ್ಯಾಯವನ್ನು ಕ್ಷಮಿಸಲಾಗದು ಎಂದು ವಾಗ್ದಾಳಿ ನಡೆಸಿದರು.

ಇನ್ನೊಂದೆಡೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಾರ್ವಜನಿಕವಾಗಿ ತಪ್ಪೊಪ್ಪಿಗೆ ನಡೆಸುವರೇ? ಎಂದು ಕಾಂಗ್ರೆಸ್ ನೇತಾರ ರಮೇಶ್ ಚೆನ್ನಿತ್ತಲ ಸವಾಲು ಹಾಕಿದರು.

ಪ್ರಸ್ತುತ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದೆ. ತೀರ್ಪು ಏನೇ ಬರಲಿ, ವಿಶ್ವಾಸಿಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕರು ಸೇರಿದಂತೆ ಎಲ್ಲರೊಂದಿಗೆ ಸಮಾಲೋಚಿಸಿದ ಬಳಿಕವಷ್ಟೇ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಡಕಂಪಳ್ಳಿ ಸುರೇಂದ್ರನ್ ಹೇಳಿದರು.

ಶಬರಿಮಲೆ ಘಟನೆ ಬಳಿಕ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 20 ಕ್ಷೇತ್ರಗಳ ಪೈಕಿ 19ರಲ್ಲಿ ಎಲ್‌ಡಿಎಫ್ ಪರಾಭವಗೊಂಡಿತ್ತು. ಹಾಗಿದ್ದರೂ ಇತ್ತೀಚೆಗಷ್ಟೇ ಅಂತ್ಯಗೊಂಡ ಪಂಚಾಯತ್ ಚುನಾವಣೆಯಲ್ಲಿ ಭಾರಿ ಜಯಗಳಿಸುವಲ್ಲಿ ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.