ADVERTISEMENT

5 ಸಾವಿರ ಮಂದಿಗಷ್ಟೇ ಅಯ್ಯಪ್ಪ ಸ್ವಾಮಿ ದರ್ಶನ ಭಾಗ್ಯ

ಹಲವು ನಿರ್ಬಂಧಗಳ ನಡುವೆ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಘೋಷಣೆ ಮೊಳಗಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 15:27 IST
Last Updated 14 ಜನವರಿ 2021, 15:27 IST
ಶಬರಿಮಲೆ ದೇವಸ್ಥಾನ– ಸಂಗ್ರಹ ಚಿತ್ರ
ಶಬರಿಮಲೆ ದೇವಸ್ಥಾನ– ಸಂಗ್ರಹ ಚಿತ್ರ   

ತಿರುವನಂತಪುರ: ಮಕರ ಸಂಕ್ರಾಂತಿ ಹಬ್ಬದ ದಿನ ಲಕ್ಷಾಂತರ ಭಕ್ತರಿಂದ ತುಂಬಿ ಹೋಗುತ್ತಿದ್ದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಈ ಬಾರಿ ಅಂತಹ ಸಂಭ್ರಮ ಕಾಣಲಿಲ್ಲ. ಕೋವಿಡ್‌ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿದ್ದರಿಂದ ಸುಮಾರು 5 ಸಾವಿರ ಭಕ್ತರಷ್ಟೇ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಗುರುವಾರ ಸಂಜೆ 6.45ರ ಸುಮಾರಿಗೆ ಪೊನ್ನಂಬಲಮೇಡು ಪರ್ವತಶ್ರೇಣಿಯಲ್ಲಿ ಮಕರ ಜ್ಯೋತಿ ಕಾಣಿಸಿಕೊಂಡಿತು. ಒಟ್ಟು ಮೂರು ಬಾರಿ ಜ್ಯೋತಿ ಪ್ರಜ್ವಲವಾಗಿ ಉರಿಯಿತು. ಈ ವೇಳೆ ಭಕ್ತರು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಘೋಷಣೆಗಳನ್ನು ಕೂಗುತ್ತ ಭಾವ ಪರವಶರಾದರು.

ಪ್ರತಿ ವರ್ಷದಂತೆ ಈ ಬಾರಿಯೂ ಪಂದಳ ಅರಮನೆಯಿಂದ ಮೆರವಣಿಗೆಯಲ್ಲಿ ಶಬರಿಮಲೆಗೆ ತರಲಾದ ಆಭರಣಗಳಿಂದ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಸಂಜೆ 6.40ರ ಸುಮಾರಿಗೆ ದೀಪಾರಾಧನೆ ಜರುಗಿತು.

ADVERTISEMENT

‘ಹೋದ ವರ್ಷ ಸಂಕ್ರಮಣದ ದಿನ ಎರಡು ಲಕ್ಷಕ್ಕೂ ಅಧಿಕ ಭಕ್ತರು ಅಯ್ಯಪ್ಪನ ಸನ್ನಿಧಿಗೆ ಬಂದಿದ್ದರು. ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ಸುಮಾರು 5 ಸಾವಿರ ಭಕ್ತರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಮಕರ ಸಂಕ್ರಾಂತಿಯಂದು ಇಷ್ಟು ಕಡಿಮೆ ಪ್ರಮಾಣದಲ್ಲಿ ಭಕ್ತರು ಸೇರಿದ್ದು ಇದೇ ಮೊದಲು’ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದರು.

ಶಬರಿಮಲೆ ತೀರ್ಥಯಾತ್ರೆ ಋತು ಶುರುವಾದ ಬಳಿಕ ಸಾಮಾನ್ಯ ದಿನಗಳಲ್ಲಿ 1000, ವಾರಾಂತ್ಯ (ಶನಿವಾರ, ಭಾನುವಾರ) ಹಾಗೂ ರಜಾ ದಿನಗಳಲ್ಲಿ 2000 ಹಾಗೂ ವಿಶೇಷ ಸಂದರ್ಭಗಳಲ್ಲಿ 5000 ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್‌–19 ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದರಿಂದ ದೇವಸ್ಥಾನದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿತ್ತು. ಹೋದ ವರ್ಷ ತೀರ್ಥಯಾತ್ರೆ ಋತುವಿನಲ್ಲಿ (2 ತಿಂಗಳು) ಒಟ್ಟು ₹200 ಕೋಟಿ ಆದಾಯ ಬಂದಿತ್ತು. ಈ ಬಾರಿ ದೇವಸ್ಥಾನದ ಆಡಳಿತ ಮಂಡಳಿಯು ಕೇವಲ ₹15 ಕೋಟಿ ಆದಾಯ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.