
ಪಿಟಿಐ
ಶಬರಿಮಲೆ (ಕೇರಳ): ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಡಿಸೆಂಬರ್ 27ರಂದು ಬೆಳಿಗ್ಗೆ 10.10–11.30ರವರೆಗೆ ಮಂಡಲ ಪೂಜೆ ನಡೆಯಲಿದೆ ಎಂದು ದೇಗುಲದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.
ಪೂಜೆಗೆ ಸಂಬಂಧಿಸಿದ ದೀಪಾರಾಧನೆ ಬೆಳಿಗ್ಗೆ 11.30ಕ್ಕೆ ಕೊನೆಗೊಳ್ಳಲಿದೆ. ಅಯ್ಯಪ್ಪ ಸ್ವಾಮಿಯ ಸ್ವರ್ಣ ವಸ್ತ್ರದ ಮೆರವಣಿಗೆಯು ಡಿ.23ರಂದು ಬೆಳಿಗ್ಗೆ 7 ಗಂಟೆಗೆ ಅರನ್ಮುಳದ ಶ್ರೀ ಪಾರ್ಥಸಾರಥಿ ದೇಗುಲದಿಂದ ಆರಂಭವಾಗಲಿದೆ. ಡಿ.26ರ ಸಂಜೆ ದೀಪಾರಾಧನೆಗೆ ಮೊದಲು ಇದು ಶಬರಿಮಲೆಗೆ ಬರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಡಿ.27ರಂದು ಮಧ್ಯಾಹ್ನ ಮೂರ್ತಿಯನ್ನು ಸ್ವರ್ಣ ವಸ್ತ್ರದ ಮೂಲಕ ಅಲಂಕರಿಸಿದ ಬಳಿಕ ಮಂಡಲ ಪೂಜೆ ನಡೆಯಲಿದ್ದು, ಅದೇ ದಿನ ರಾತ್ರಿ 11 ಗಂಟೆಗೆ ದೇಗುಲವನ್ನು ಮುಚ್ಚಲಾಗುವುದು. ‘ಮಕರವಿಳಕ್ಕು’ ಉತ್ಸವಕ್ಕಾಗಿ ಡಿ.30ರಂದು ಸಂಜೆ 5 ಗಂಟೆಗೆ ದೇಗುಲವನ್ನು ಮತ್ತೆ ತೆರೆಯಲಾಗುವುದು ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ.