ADVERTISEMENT

ಶಬರಿಮಲೆ ಯಾತ್ರೆ ಆರಂಭ: ಮೂಗಿನೊಳಗೆ ನೀರು ಹೋಗದಂತೆ ಎಚ್ಚರವಹಿಸಲು ಸರ್ಕಾರದ ಸೂಚನೆ

ಪಿಟಿಐ
Published 15 ನವೆಂಬರ್ 2025, 11:46 IST
Last Updated 15 ನವೆಂಬರ್ 2025, 11:46 IST
ಶಬರಿಮಲೆ ದೇವಾಲಯ
ಶಬರಿಮಲೆ ದೇವಾಲಯ   

ಪತ್ತನಂತಿಟ್ಟ: ಕೇರಳದಲ್ಲಿ ಕಳೆದ ಕೆಲ ತಿಂಗಳುಗಳಿಂದ ಪತ್ತೆಯಾಗುತ್ತಿರುವ ‘ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್’ ಎಂಬ ಮಿದುಳು ಜ್ವರ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಶಬರಿಮಲೆಯ ವಾರ್ಷಿಕ ಯಾತ್ರೆ ಕೈಗೊಳ್ಳುವವರಿಗೆ ಸೂಚನೆ ನೀಡಿದ್ದು, ಮೂಗಿನೊಳಗೆ ನೀರು ಹೋಗದಂತೆ ಎಚ್ಚರ ವಹಿಸುವಂತೆ ಹೇಳಿದೆ.

ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ತಮ್ಮ ದಾಖಲೆ ಹಾಗೂ ಔಷಧಗಳನ್ನು ಕೊಂಡೊಯ್ಯಬೇಕು. ಯಾತ್ರೆಯ ಸಂದರ್ಭದಲ್ಲಿ ನಿಯಮಿತ ಔಷಧಗಳನ್ನು ನಿಲ್ಲಸಬಾರದು. ಶಬರಿಮಲೆಗೆ ನಡೆಯುವಂತ ಸಂದರ್ಭದಲ್ಲಿ ಒತ್ತಡ ನಿರ್ವಹಣೆಯಾಗಿ ನಡಿಗೆಯಂತ ಲಘು ವ್ಯಾಯಾಮ ಮಾಡುವಂತೆಯೂ ಸಲಹೆ ನೀಡಿದೆ.

‘ಬೆಟ್ಟವನ್ನು ನಿಧಾನವಾಗಿ ಹತ್ತಬೇಕು. ಮಧ್ಯದಲ್ಲಿ ಪುಟ್ಟ ವಿರಾಮ ತೆಗೆದುಕೊಳ್ಳಬೇಕು. ಸುಸ್ತು ಎನಿಸಿದರೆ, ಎದೆ ನೋವು ಕಂಡುಬಂದರೆ ವೈದ್ಯಕೀಯ ನೆರವು ಪಡೆಯಬೇಕು. ತುರ್ತು ಪರಿಸ್ಥಿತಿಯಲ್ಲಿ 04735 203232 ಸಂಖ್ಯೆಯನ್ನು ಸಂಪರ್ಕಿಸಬೇಕು’ ಎಂದು ಕೇರಳ ಸರ್ಕಾರ ಹೇಳಿದೆ.

ADVERTISEMENT

‘ಕುದಿಸಿದ ನೀರನ್ನೇ ಕುಡಿಯಬೇಕು. ಕೈತೊಳೆಯಲು, ಅಡುಗೆಗೆ, ಹಣ್ಣುಗಳನ್ನು ತೊಳೆಯಲು ಕುದಿಸಿದ ನೀರನ್ನೇ ಬಳಸಬೇಕು. ಹಳಸಿದ ಹಾಗೂ ಹೊರಗೆ ತೆರೆದಿದ್ದ ಆಹಾರಗಳನ್ನು ಸೇವಿಸಬಾರದು. ಬಯಲು ಬಹಿರ್ದೆಸೆ ನಿಷೇಧಿಸಲಾಗಿದೆ. ಶೌಚಾಲಯಗಳನ್ನೇ ಬಳಸಬೇಕು ಹಾಗೂ ನಂತರ ಶುಚಿಯಾಗಿ ಕೈತೊಳೆದುಕೊಳ್ಳಬೇಕು. ತ್ಯಾಜ್ಯಗಳನ್ನು ನಿರ್ದಿಷ್ಟ ಜಾಗದಲ್ಲೇ ಹಾಕಬೇಕು’ ಎಂದು ಸರ್ಕಾರ ಸೂಚಿಸಿದೆ.

‘ಬೆಟ್ಟ ಹತ್ತುವಾಗ ಹಾವು ಕಚ್ಚಿದರೆ ತಕ್ಷಣ ವೈದ್ಯಕೀಯ ನೆರವು ಕೋರಬೇಕು. ಆಸ್ಪತ್ರೆಗಳಲ್ಲಿ ಹಾವು ಕಡಿತ ಔಷಧ ದಾಸ್ತಾನು ಇಡಲಾಗಿದೆ. ಯಾತ್ರಿಕರ ವೈದ್ಯಕೀಯ ನೆರವಿಗಾಗಿ ವಿವಿಧ ವೈದ್ಯಕೀಯ ಕಾಲೇಜುಗಳ ತರಬೇತಿ ಹೊಂದಿದ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರನ್ನು ನಿಯೋಜಿಸಲಾಗಿದೆ. ಇವರು ಯಾತ್ರೆ ಸಾಗುವ ಮಾರ್ಗದಲ್ಲೇ ಲಭ್ಯರಿರಲಿದ್ದಾರೆ. ದಿನದ 24 ಗಂಟೆಗಳ ಕಾಲ ಪಂಪಾದಲ್ಲಿರುವ ವೈದ್ಯಕೀಯ ಕೇಂದ್ರ ಕೆಲಸ ಮಾಡಲಿದೆ’ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಕನ್ನಡ ಸಹಿತ ವಿವಿಧ ಭಾಷೆಗಳಲ್ಲಿ ಜಾಗೃತಿ ಸಂದೇಶ

‘ಪರ್ವತ ಹತ್ತುವಾಗ ಯಾತ್ರಾರ್ಥಿಗಳು ಯಾವುದೇ ಅಸ್ವಸ್ಥತೆಯನ್ನು ಅನುಭವಿಸಿದರೆ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು. ಮಲಯಾಳಂ, ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು ಹಾಗೂ ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಜಾಗೃತಿ ಸಾಮಗ್ರಿಗಳನ್ನು ಸಿದ್ಧಪಡಿಸಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ ಸಮನ್ವಯದೊಂದಿಗೆ ಸಮಗ್ರ ವೈದ್ಯಕೀಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ’ ಎಂದಿದ್ದಾರೆ.

‘ಪಂಪಾಾದಿಂದ ಸನ್ನಿಧಾನಂಗೆ ಹೋಗುವ ಮಾರ್ಗದಲ್ಲಿ ತುರ್ತು ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕೊನ್ನಿ ವೈದ್ಯಕೀಯ ಕಾಲೇಜು ಮೂಲ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ. ಪತ್ತನಂತಿಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಹೃದ್ರೋಗ ಸೌಲಭ್ಯಗಳು ಮತ್ತು ಕ್ಯಾತ್ ಲ್ಯಾಬ್ ಅನ್ನು ಆರಂಭಿಸಲಾಗಿದೆ. ಹೃದಯ ಸಂಬಂಧಿತ ತುರ್ತು ಚಿಕಿತ್ಸೆಗಳಿಗೆ ಆಂಬುಲೆನ್ಸ್‌ಗಳು ಸಹ ಲಭ್ಯವಿರುತ್ತವೆ. ಜತೆಗೆ ಸನ್ನಿಧಾನಂ ಮತ್ತು ಪಂಪಾಾ ನಡುವೆ ವಿಶೇಷ ಆಂಬುಲೆನ್ಸ್‌ ಲಭ್ಯ’ ಎಂದು ಸಚಿವೆ ವೀಣಾ ತಿಳಿಸಿದ್ದಾರೆ.

‘ಎಲ್ಲಾ ಆಸ್ಪತ್ರೆಗಳು ಡಿಫಿಬ್ರಿಲೇಟರ್‌ಗಳು, ವೆಂಟಿಲೇಟರ್‌ಗಳು ಮತ್ತು ಹೃದಯ ಮಾನಿಟರ್‌ಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಪಂದಳಂ ವಲಿಯ ಕೊಯಿಕ್ಕಲ್ ದೇವಸ್ಥಾನದಲ್ಲಿ ತಾತ್ಕಾಲಿಕ ಔಷಧಾಲಯವನ್ನು ಸ್ಥಾಪಿಸಲಾಗಿದೆ. ವಡಸ್ಸೇರಿಕ್ಕರ ಮತ್ತು ಪತ್ತನಂತಿಟ್ಟದಲ್ಲಿ ಕನಿಷ್ಠ ಒಂದು ಔಷಧ ಅಂಗಡಿ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರೈಕೆಯಾಗುವ ಆಹಾರಗಳ ಗುಣಮಟ್ಟ ಪರೀಕ್ಷೆಗೆ ಆಹಾರ ಸುರಕ್ಷತಾ ಇಲಾಖೆಯು ವಿಶೇಷ ತಂಡಗಳನ್ನು ರಚಿಸಿದೆ. ಇವರಿಗೆ ಆರೋಗ್ಯ ಕಾರ್ಡ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.