ADVERTISEMENT

ನಿಲಕ್ಕಲ್‌, ಪಂಪಾ ಸೇರಿದಂತೆ ಹಲವೆಡೆ ನಿಷೇದಾಜ್ಞೆ: ಹರತಾಳಕ್ಕೆ ಎಎಚ್‌ಪಿ ಕರೆ

ಪಿಟಿಐ
Published 18 ಅಕ್ಟೋಬರ್ 2018, 8:30 IST
Last Updated 18 ಅಕ್ಟೋಬರ್ 2018, 8:30 IST
   

ತಿರುವನಂತಪುರ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ಗುರುವಾರವೂ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಿಲಕ್ಕಲ್‌, ಪಂಪಾ ಸೇರಿದಂತೆ ಹಲವೆಡೆ ಪೊಲೀಸರು ನಿಷೇದಾಜ್ಞೆ ಜಾರಿ ಮಾಡಿದ್ದಾರೆ.

ವಾಹನಗಳನ್ನುತಪಾಸಣೆ ಮಾಡಿ ಬಿಡುತ್ತಿದ್ದು, ಗುಂ‍ಪು ಕಟ್ಟಿರುವ ಜನರನ್ನು ಚದುರಿಸುತ್ತಿದ್ದಾರೆ. ಗುರುವಾರ ಮತ್ತು ಶುಕ್ರವಾರ ನಿಷೇದಾಜ್ಞೆ ಜಾರಿಯಲ್ಲಿರಲಿದೆ ಎಂದು ಪೊಲೀಸರು ಹೇಳಿದ್ದಾರೆ

ಭದ್ರತೆಗಾಗಿ ಒಂದು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇವರಲ್ಲಿ ನೂರು ಮಹಿಳಾ ಕಾನ್‌ಸ್ಟೆಬಲ್‌ಗಳು ಇದ್ದಾರೆ. ನಾಲ್ವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಪರಿಸ್ಥಿತಿ ನಿಭಾಯಿಸುವ ಹೊಣೆ ಹೊತ್ತಿದ್ದಾರೆ.

ADVERTISEMENT

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

24 ಗಂಟೆ ಮುಷ್ಕರಕ್ಕೆ ಕರೆ

ಅಂತರರಾಷ್ಟ್ರೀಯ ಹಿಂದೂ ಪರಿಷತ್‌ (ಎಎಚ್‌ಪಿ) ಹಾಗೂ ಶಬರಿಮಲೆ ಸಂರಕ್ಷಣ ಸಮಿತಿ 24 ಗಂಟೆ ಮುಷ್ಕರಕ್ಕೆ ಕರೆ ಕೊಟ್ಟಿವೆ. ಬುಧವಾರ ಮಧ್ಯ ರಾತ್ರಿಯಿಂದಲೇ ಮುಷ್ಕರ ಆರಂಭವಾಗಿದೆ. ಈ ಮುಷ್ಕರಕ್ಕೆ ಅಯ್ಯಪ್ಪ ಭಕ್ತರು ಮತ್ತು ಬಿಜೆಪಿ ಬೆಂಬಲ ವ್ಯಕ್ತಪಡಿಸಿವೆ.

ನಿಲಕ್ಕಲ್‌ ಮತ್ತು ಪಂಪಾದಲ್ಲಿ ಚಪ್ಪರ ಹಾಕಿಕೊಂಡು ಬಿಜೆಪಿ ಕಾರ್ಯಕರ್ತರು ಮತ್ತು ಅಯ್ಯಪ್ಪ ಭಕ್ತರು ಪ್ರತಿಭಟನೆ ಮಾಡುತ್ತಿದ್ದಾರೆ.

ಪರಿಸ್ಥಿತಿ ಶಾಂತವಾಗಿದೆ: ಶಬರಿಮಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಯಾವುದೇ ಸಮಸ್ಯೆ ಇಲ್ಲ, ಭದ್ರತೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎರಡು ದಿನಗಳವರೆಗೆ ಇಲ್ಲಿ ನಿಷೇದಾಜ್ಞೆಯನ್ನು ಜಾರಿ ಮಾಡಲಾಗಿದೆ. ಪರಿಸ್ಥಿತಿ ನೋಡಿಕೊಂಡ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಥನಂತಿಟ್ಟ ಜಿಲ್ಲಾಧಿಕಾರಿ ಪಿ.ಬಿ ನೂಹ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.