ADVERTISEMENT

ಕೇರಳ | ಶಬರಿಮಲೆಗೆ ಪ್ರವೇಶ, ಮತ್ತೆ ವಿವಾದ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 13:47 IST
Last Updated 10 ಜೂನ್ 2020, 13:47 IST
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ   

ತಿರುವನಂತಪುರ: ಶಬರಿಮಲೆ ದೇವಸ್ಥಾನದಲ್ಲಿ ಜೂನ್‌ 14ರಿಂದ ಭಕ್ತರಿಗೆ ಪ್ರವೇಶ ನೀಡುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಆದರೆ, ಸರ್ಕಾರದ ಈ ತೀರ್ಮಾನವನ್ನು ದೇವಸ್ಥಾನದ ಪ್ರಧಾನ ಅರ್ಚಕ ಕಂಡರರ್‌ ಮಹೇಶ್‌ ಮೋಹನರ್‌ ಅವರು ವಿರೋಧಿಸಿದ್ದಾರೆ.

‘ರಾಜ್ಯದಲ್ಲಿ ಕೋವಿಡ್‌–19 ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವುದರಿಂದ 14ರಿಂದ ದೇವಸ್ಥಾನವನ್ನು ತೆರೆಯುವ ಪ‍್ರಸ್ತಾಪವನ್ನು ಸದ್ಯಕ್ಕೆ ಕೈಬಿಡಬೇಕು’ ಎಂದು ಅರ್ಚಕ ಮೋಹನರ್‌ ಅವರು ತಿರುವಾಂಕೂರು ದೇವಸ್ವಂ ಮಂಡಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಇದಾದ ಬಳಿಕ, ಅರ್ಚಕರು ಹಾಗೂ ದೇವಸ್ಥಾನದ ಇತರ ಪ್ರತಿನಿಧಿಗಳ ಜತೆ ಗುರುವಾರ ಸಭೆ ನಡೆಸುವುದಾಗಿ ಸರ್ಕಾರ ಹೇಳಿದೆ.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಚಾರದಲ್ಲಿ ಸಿಪಿಎಂ ನೇತೃತ್ವದ ಕೇರಳ ಸರ್ಕಾರವು ಇಕ್ಕಟ್ಟಿಗೆ ಸಿಲುಕಿತ್ತು. ಈಗ ಮತ್ತೆ ಅಂಥದ್ದೇ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ದೇವಸ್ಥಾನವನ್ನು ತೆರೆಯುವ ವಿಚಾರದಲ್ಲಿ ರಾಜ್ಯದ ಬಿಜೆಪಿ ನಾಯಕರು ಅರ್ಚಕರಿಗೆ ಬೆಂಬಲ ನೀಡಿದ್ದಾರೆ. ಆದರೆ, ‘ಮುಖ್ಯ ಅರ್ಚಕರು ರಾಜಕೀಯ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ದೇವಸ್ಥಾನಕ್ಕೆ ಸಂಬಂಧಪಟ್ಟವರ ಜತೆ ಚರ್ಚಿಸಿದ ನಂತರವೇ 14ರಿಂದ ಭಕ್ತರಿಗೆ ಅವಕಾಶ ಕೊಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಭಕ್ತರ ಭಾವನೆಗಳನ್ನು ಗೌರವಿಸಿ ಈ ನಿರ್ಧಾರಕ್ಕೆ ಬರಲಾಗಿತ್ತೇ ವಿನಾ ದೇವಸ್ಥಾನಗಳನ್ನು ಕೂಡಲೇ ತೆರೆಯಬೇಕೆಂಬ ಹಟ ಸರ್ಕಾರಕ್ಕೆ ಇಲ್ಲ. ಈಗ ಮುಖ್ಯ ಅರ್ಚಕರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ, ಪುನಃ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ದೇವಸ್ವಂ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ತಿಳಿಸಿದ್ದಾರೆ.

ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಸೇರಿದಂತೆ ಕೇರಳದ ಕೆಲವು ಪ್ರಸಿದ್ಧ ದೇವಸ್ಥಾನಗಳನ್ನು ಮಂಗಳವಾರದಿಂದ ತೆರೆಯಲಾಗಿದೆ. ಆದರೆ ಭೇಟಿ ನೀಡುವ ಭಕ್ತರ ಸಂಖ್ಯೆ ತೀರಾ ಕಡಿಮೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.