ADVERTISEMENT

ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಾರ್ಥನೆ

ಪಿಟಿಐ
Published 22 ಅಕ್ಟೋಬರ್ 2025, 9:09 IST
Last Updated 22 ಅಕ್ಟೋಬರ್ 2025, 9:09 IST
<div class="paragraphs"><p>ಶಬರಿಮಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಾರ್ಥನೆ</p></div>

ಶಬರಿಮಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಾರ್ಥನೆ

   

- ಎಕ್ಸ್ ಚಿತ್ರ

ಪತ್ತನಂತಿಟ್ಟ: ಇಲ್ಲಿನ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇಗುಲದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಪಾರ್ಥನೆ ಮಾಡಿದರು.

ADVERTISEMENT

ಆ ಮೂಲಕ ದೇಶದ ಮಹಿಳಾ ಮುಖ್ಯಸ್ಥರೊಬ್ಬರು ಇದೇ ಮೊದಲ ಬಾರಿಗೆ ಈ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದಂತಾಯಿತು. ಅಲ್ಲದೇ ದ್ರೌಪದಿ ಮುರ್ಮು ಅವರು ಶಬರಿಮಲೆಗೆ ಭೇಟಿ ನೀಡಿದ ದೇಶದ ಎರಡನೇ ರಾಷ್ಟ್ರಪತಿ. ಈ ಹಿಂದೆ 1970ರಲ್ಲಿ ಅಂದಿನ ರಾಷ್ಟ್ರಪತಿ ವಿ.ವಿ ಗಿರಿಯವರು ಶಬರಿಮಲೆಗೆ ಭೇಟಿ ನೀಡಿದ್ದರು. ಅವರು ಡೋಲಿ ಮೂಲಕ ಅಯ್ಯಪ್ಪ ಸನ್ನಿಧಿಗೆ ತೆರಳಿದ್ದರು.

ಬೆಳಿಗ್ಗೆ 11 ಗಂಟೆಗೆ ಪಂಪಾ ತಲುಪಿದ ಅವರು, ಪಂಪಾ ನದಿಯಲ್ಲಿ ಕಾಲು ತೊಳೆದು, ಅಲ್ಲಿಯೇ ಸಮೀಪ ಇರುವ ಗಣಪತಿ ದೇಗುಲ ಸಹಿತ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದರು.

ಗಣಪತಿ ದೇಗುಲದ ಮೇಲ್ ಶಾಂತಿ ವಿಷ್ಣು ನಂಬೂದರಿಯವರು ಮುರ್ಮು ಅವರ ‘ಇರುಮುಡಿ’ ಕಟ್ಟಿದರು. ಮುರ್ಮು ಕಪ್ಪು ಸೀರೆ ಧರಿಸಿದ್ದರು.

ರಾಷ್ಟ್ರಪತಿ ಜೊತೆಗೆ ಎಡಿಸಿ ಸೌರಭ್ ಎಸ್. ನಾಯರ್, ಪಿಎಸ್ಒ ವಿನಯ್ ಮಥೂರ್, ಅಳಿಯ ಗಣೇಶ್ ಚಂದ್ರ ಹೊಂಬ್ರಮ್ ಕೂಡ ಇರುಮಡಿ ಹೊತ್ತು ದರ್ಶನ ಪಡೆದರು ಎಂದು ಜಿಲ್ಲೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇರುಮುಡಿ ಹೊತ್ತು ದೇಗುಲದ ಸಮೀದ ಈಡುಗಾಯಿ ಒಡೆದರು. ನಾಲ್ಕು ಚಕ್ರದ ವಿಶೇಷ ವಾಹನದ ಮೂಲಕ ಸನ್ನಿಧಾನಕ್ಕೆ ತೆರಳಿದರು. ಸನ್ನಿಧಾನದ 18 ಮೆಟ್ಟಿಲುಗಳನ್ನು ಏರಿದರು. ಅಲ್ಲಿ ಅವರನ್ನು ದೇವಸ್ವಂ ಸಚಿವ ವಿ.ಎನ್ ವಾಸವನ್ ಹಾಗೂ ಟ್ರಾವಂಕೂರ್ ದೇವಸ್ವಂ ಬೋರ್ಡ್ ನ (ಟಿಡಿಬಿ) ಅಧ್ಯಕ್ಷ ಪಿ.ಎಸ್ ಪ್ರಶಾಂತ್ ಸ್ವಾಗತಿಸಿದರು. ದೇವಸ್ಥಾನದ ತಂತ್ರಿ ಕಂದರಾರು ಮಹೇಶ್ ಮೊಹನಾರು ಅವರು ರಾಷ್ಟ್ರಪತಿಗೆ ಪೂರ್ಣಕುಂಭ ಸ್ವಾಗತ ನೀಡಿದರು.

ದರ್ಶನ ಪಡೆದ ಬಳಿಕ, ದೇಗುಲದ ಮೆಟ್ಟಿಲಿನಲ್ಲಿ ಇರುಮುಡಿ ಇರಿಸಿದರು. ಅದನ್ನು ಮೇಲ್ ಶಾಂತಿ ಪೂಜೆಗಾಗಿ ತೆಗೆದುಕೊಂಡು ಹೋದರು. ದರ್ಶನದ ಬಳಿಕ ಸಮೀಪ ಇರುವ ಮಲಿಕಪ್ಪುರಂ ಸಹಿತ ಹಲವು ದೇಗುಲಗಳಿಗೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.