ADVERTISEMENT

ಕೇರಳದಾದ್ಯಂತ ಪ್ರತಿಭಟನೆಯ ಬಿಸಿ, ಸಿಪಿಎಂ-ಬಿಜೆಪಿ ನಡುವೆ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 13:37 IST
Last Updated 2 ಜನವರಿ 2019, 13:37 IST
ಕೃಪೆ: ಎಎನ್ಐ
ಕೃಪೆ: ಎಎನ್ಐ   

ತಿರುವನಂತಪುರಂ: ಇಬ್ಬರು ಮಹಿಳೆಯರು ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿರುವ ಸುದ್ದಿ ಪ್ರಕಟವಾಗುತ್ತಿದ್ದಂತೆ ಕೇರಳದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ.
ಬಿಜೆಪಿ- ಯುವಮೋರ್ಚಾ ಕಾರ್ಯಕರ್ತರು ಕೇರಳದೆಲ್ಲೆಡೆ ಪ್ರತಿಭಟನೆಗಳು ನಡೆಸುತ್ತಿದ್ದಾರೆ. ಹಲವಾರು ಪ್ರದೇಶಗಳಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದು, ರಸ್ತೆ ತಡೆಯೊಡ್ಡಲಾಗಿದೆ. ಎಂ.ಸಿ ರೋಡ್ ಮತ್ತು ಚೆಂಗನ್ನೂರ್ ವೆಳ್ಳಾವೂರ್, ಮೂವಾಟ್ಟುಪ್ಪುಳದಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ.

ತಿರುವನಂತಪುರ

ತಿರುವನಂತಪುರದ ಸಚಿವಾಲಯದ ಮುಂದೆ ಬಿಜೆಪಿ ಮುಷ್ಕರ ಚಪ್ಪರದ ಮುಂದೆ ಬೃಹತ್ ಮಟ್ಟದ ಪ್ರತಿಭಟನೆಗಳು ನಡೆಯುತ್ತಿವೆ. ನೂರಕ್ಕಿಂತಲೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಲ್ಲಿ ಪೊಲೀಸ್ ಪಡೆ ನಿಯೋಜನೆಯಾಗಿದೆ.

ADVERTISEMENT

ಏತನ್ಮಧ್ಯ, ಸಚಿವಾಲಯದ ಮುಂದೆ ಬಿಜೆಪಿ- ಸಿಪಿಎಂ ಕಾರ್ಯರ್ತರ ನಡುವೆ ಸಂಘರ್ಷವುಂಟಾಗಿದೆ.ಇದಕ್ಕಿಂತ ಸ್ವಲ್ಪ ಮುನ್ನ ಬಿಜೆಪಿ-ಯುವಮೋರ್ಚಾ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ 5 ಪತ್ರಕರ್ತರಿಗೆ ಗಾಯಗಳಾಗಿವೆ. ಪ್ರತಿಭಟನಾಕಾರರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.

ಪೊಲೀಸ್ ಬಿಗಿ ಭದ್ರತಾ ಕೋಟೆಯನ್ನು ಮುರಿದುಸಚಿವಾಲಯದ ಒಳಗೆ ನುಗ್ಗಲು ಯತ್ನಿಸಿದ್ದ ನಾಲ್ಕು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನೆಯ್ಯಾಂಟಿಂಕರದಲ್ಲಿ ತಿರುವಿದಾಂಕೂರ್ ದೇವಸ್ವಂ ಮಂಡಳಿ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಪತಾಕೆ ಕಟ್ಟಿದ್ದಾರೆ.ಕೊಚ್ಚಿಯಲ್ಲಿಯೂ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಕಚ್ಚೇರಿಪ್ಪಡಿಯಲ್ಲಿ ರಸ್ತೆ ತಡೆಯೊಡ್ಡಲಾಗಿದೆ.

ಕೊಲ್ಲಂ

ಕೊಲ್ಲಂ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಬಲವಂತವಾಗಿ ಅಂಗಡಿ ಬಂದ್ ಮಾಡಿಸಿದ್ದಾರೆ. ರಾಮನ್ ಕುಳಂಗರ ಜಂಕ್ಷನ್‍ನಲ್ಲಿರುವ ಕಾರ್ಪರೇಷನ್ ಕಟ್ಟಡದಲ್ಲಿರುವ ಅಂಗಡಿಗೆ ನುಗ್ಗಿದ ಪ್ರತಿಭಟನಾಕಾರರು ಮಹಿಳೆ ಸೇರಿದಂತೆ ಇಬ್ಬರು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿರುವುದಾಗಿ ಸುದ್ದಿಯಿದೆ.ಏತನ್ಮಧ್ಯೆ, ರಾಮನ್ ಕುಳಂಗರದಲ್ಲಿ ಖಾಸಗಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಮೇಲೂ ಹಲ್ಲೆ ನಡೆದಿದೆ.ಈ ವೇಳೆ ಫೋಟೊ ತೆಗೆಯಲು ಯತ್ನಿಸಿದ ಮಲಯಾಳ ಮನೋರಮಾ ಪತ್ರಿಕೆಯ ಛಾಯಾಗ್ರಾಹರಕ ವಿ.ಸನಲ್ ಕುಮಾರ್ ಮೇಲೆಯೂ ಹಲ್ಲೆ ನಡೆದಿದೆ.ಬಿಷಪ್ ಜೆರೊಂ ನಗರದಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದಕ್ಕಾಗಿ ಮೀಡಿಯಾ ಒನ್ ವಾಹಿನಿಯ ಕ್ಯಾಮೆರಾಮೆನ್ ಬಿಜು ಮೇಲೆ ಪ್ರತಿಭಟನಾಕಾರರು ಹಲ್ಲೆ ಮಾಡಿದ್ದಾರೆ.

ಆಲಪ್ಪುಳ
ಆಲಪ್ಪುಳದಲ್ಲಿ ಸಂಘಪರಿವಾರದ ಸಂಘಟನೆಗಳು ಆಲಪ್ಪುಳ- ಚಂಙನಾಶ್ಶೇರಿ ರಸ್ತೆ ತಡೆಯೊಡ್ಡಿದ್ದಾರೆ.ಅಂಬಲಪ್ಪುಳ ಶ್ರೀಕೃಷ್ಣ ದೇವಸ್ಥಾನದ ದೇವಸ್ವಂ ಮಂಡಳಿ ಕಚೇರಿಯನ್ನು ಶಬರಿಮಲೆ ಕರ್ಮ ಸಮಿತಿ ಕಾರ್ಯಕರ್ತರು ಮುಚ್ಚಿಸಿದ್ದಾರೆ. ಕಚೇರಿಗೆ ಬೀಗ ಹಾಕಿ ಬೀಗದ ಕೀಲಿಯನ್ನು ಪ್ರತಿಭಟನಾಕಾರರು ತೆಗೆದುಕೊಂಡು ಹೋಗಿದ್ದಾರೆ.

ಮಾವೇಲಿಕ್ಕರದಲ್ಲಿ ಬಿಜೆಪಿ- ಸಂಘ ಪರಿವಾರ ಸಂಘಟನೆಗಳು ವಾಹನಗಳಿಗೆ ತಡೆಯೊಡ್ಡಿದೆ.ಕೆಎಸ್‍ಆರ್‌ಟಿಸಿ ಬಸ್ ಸೇರಿದಂತೆ ಎಲ್ಲ ಬಸ್ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಬುದ್ದ ಜಂಕ್ಷನ್‍ನಲ್ಲಿ ಪಳನಿ ಎಂಬವರ ಅಂಗಡಿಗೆ ನುಗ್ಗಿ ಪಳನಿ ಅವರ ಪತ್ನಿ ಸುಶೀಲ (45) ಅಂಗವಿಕಲ ಮಗ ಜಯಪ್ರಕಾಶ್ (17) ಎಂಬವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ ಎಂದು ಮನೋರಮಾ ಆನ್‍ಲೈನ್ ವರದಿ ಮಾಡಿದೆ.

ಎರ್ನಾಕುಲಂ
ಕೊಚ್ಚಿಯ ಕಚ್ಚೇರಿಪ್ಪಡಿ ಎಂಬಲ್ಲಿ ರಸ್ತೆ ತಡೆಯೊಡ್ಡಲಾಗಿದೆ.

ಕೋಟ್ಟಯಂ
ಕರುಕ್ಕಾಚ್ಚಾಲ್ ಎಂಬಲ್ಲಿ ಶಬರಿಮಲೆಕರ್ಮ ಸಮಿತಿ ಸದಸ್ಯರು ಅಂಗಡಿಗಳು ಮುಚ್ಚಿಸಿ ರಸ್ತೆ ತಡೆಯೊಡ್ಡಿದ್ದಾರೆ,

ಮಲಪ್ಪುರಂ
ಪೆರಿಂದಲ್‍ಮಣ್ಣದಲ್ಲಿ ಶಬರಿಮಲೆ ಕರ್ಮ ಸಮಿತಿ ಪ್ರತಿಭಟನೆ ವೇಳೆ ಕೆಎಸ್‌ಆರ್‌ಟಿಸಿ ಬಸ್ಸಿನ ಮೇಲೆ ಕಲ್ಲು ತೂರಟ ಮಾಡಲಾಗಿದೆ, ಇದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಲು ಯತ್ನಿಸಿದ ಪ್ರಯಾಣಿಕರ ಮೇಲೆ ಹಲ್ಲೆ ನಡೆದಿದೆ .

ಪಾಲಕ್ಕಾಡ್
ಶಬರಿಮಲೆ ಕರ್ಮ ಸಮಿತಿ ಸದಸ್ಯರು ಸುಲ್ತಾನ್‍ಪೇಟ್ಟ ಜಂಕ್ಷನ್‍ನಲ್ಲಿ ರಸ್ತೆ ತಡೆಯೊಡ್ಡಿದ್ದಾರೆ.ಸಚಿವ ಎ.ಕೆ.ಬಾಲನ್ ಅವರ ಕೆಎಸ್‍ಇಬಿ ಐಬಿ ಮೇಲೆ ಕಲ್ಲು ತೂರಾಟವಾಗಿದ್ದು, ಪೊಲೀಸ್ ಲಾಠಿ ಚಾರ್ಜ್ ಮಾಡಿದ್ದಾರೆ.

ಪತ್ತನಂತಿಟ್ಟ
ಇಲ್ಲಿ ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿವೆ.ಕೊಳಂಚೇರಿಯಲ್ಲಿ ಸರ್ಕಾರಿ ಬಸ್‍ಗಳ ಮೇಲೆ ಕಲ್ಲು ತೂರಟ ನಡೆದಿದೆ. ಪಂದಳಂ ವಲಿಯ ಕೋಯಿಕ್ಕಲ್ ದೇವಸ್ಥಾನದ ದೇವಸ್ವಂ ಮಂಡಳಿ ಕಚೇರಿಗೆ ಶಬರಿಮಲೆ ಕರ್ಮ ಸಮಿತಿ ಸದಸ್ಯರು ಬೀಗ ಹಾಕಿದ್ದಾರೆ.ಆರನ್ಮುಳ ಸಿಪಿಎಂ ಏರಿಯಾ ಕಮಿಟಿ ಕಚೇರಿ ಮೇಲೆ ಕಲ್ಲು ತೂರಾಟ ನಡೆದಿದೆ.

ತ್ರಿಶ್ಶೂರು
ಗುರುವಾಯೂರಿನಲ್ಲಿ ಸಚಿವ ಕಡಕ್ಕಂಪಳ್ಳಿಯವರ ವಿರುದ್ಧ ಯುವಮೋರ್ಚಾ ಕಾರ್ಯಕತರ್ತರು ಕಪ್ಪು ಪತಾಕೆ ತೋರಿಸಿದ್ದಾರೆ.ಸಚಿವರು ಕಾರ್ಯಕ್ರಮ ರದ್ದು ಮಾಡಿ ವಿಶ್ರಾಂತಿ ಗೃಹದಲ್ಲಿದ್ದಾರೆ.ಕೊಡಂಗಲ್ಲೂರಿನಲ್ಲಿ ಅಘೋಷಿತ ಹರತಾಳ ನಡೆಯುತ್ತಿದೆ.ಕೆಎಸ್‍ಆರ್‌ಟಿಸಿ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿದೆ.

ಕಾಸರಗೋಡು
ಬಿಜೆಪಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಕರಂದಕ್ಕಾಡ್, ನುಳ್ಳಿಪ್ಪಾಡಿ ಮತ್ತು ಚಳಿಯಂಗೋಡ್ಮತ್ತು ಜೆಟ್ಟುಕುಂಡ್‍ನಲ್ಲಿ ವಾಹನಗಳನ್ನು ತಡೆಯಲಾಗಿದೆ.ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸಿದ್ದಾರೆ.

ಕಣ್ಣೂರು
ಇರಟ್ಟಿಯಲ್ಲಿ ಸಚಿವೆ ಕೆ.ಕೆ.ಶೈಲಜಾಅವರಿಗೆ ಯುವಮೋರ್ಚಾ ಕಾರ್ಯಕರ್ತರು ಕಪ್ಪುಪತಾಕೆ ತೋರಿಸಿದ್ದಾರೆ.ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.ಕಣ್ಣೂರಿನಿಂದ ಕಾಂಞಗಾಂಡ್‍ಗೆ ಹೋಗುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್ ಮೇಲೆ ಹೊಸ ಬಸ್ ನಿಲ್ದಾಣ ಬಳಿ ಕಲ್ಲು ತೂರಾಟ ನಡೆದಿದೆ. ಪಳ್ಳಿಕುನ್ನಿನಲ್ಲಿ ಟಯರ್‌ಗೆ ಬೆಂಕಿ ಇಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.