ಪಟ್ಟಣಂತಿಟ್ಟ: ‘ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶ ಮತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆ ಕುರಿತಂತೆ 2016ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಲಾಗಿತ್ತು. ಅಲ್ಲಿಂದ ಯಾವುದೇ ಹೊಸ ಅರ್ಜಿ ಸಲ್ಲಿಸಿಲ್ಲ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮುಟ್ಟಿನ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಹೊಸ ಪ್ರಮಾಣಪತ್ರ ಸಲ್ಲಿಸುವ ಯಾವುದೇ ಅಗತ್ಯ ಈಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಒತ್ತಾಯಿಸಿವೆ.
‘ಶಬರಿಮಲೆ ದೇವಸ್ಥಾನದಲ್ಲಿ ಎಲ್ಲಾ ರೀತಿಯ ಆಚರಣೆ ಹಾಗೂ ಪದ್ಧತಿಗಳನ್ನು ಯಾವುದೇ ಬದಲಾವಣೆ ಇಲ್ಲದೆ ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಪ್ರಕರಣವು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದಿದೆ. ಮಹಿಳೆಯರ ಪ್ರವೇಶದ ವಿಷಯದಲ್ಲಿ ದೇವಸ್ಥಾನವು ತನ್ನ ಪದ್ಧತಿಗಳ ರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಲಾಗಿದೆ’ ಎಂದಿದ್ದಾರೆ.
‘ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ. ಕಳೆದ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ 54 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ. ಸರ್ಕಾರ, ಟಿಡಿಬಿ, ಪಂದಲಮ್ ರಾಜ ಮನೆತನ, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಕಳೆದ ಋತುವಿನಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ. ಆಯೋಜನೆಗೊಂಡಿರುವ ಜಾಗತಿಕ ಅಯ್ಯಪ್ಪ ಸಂಗಮಮ್ ಕೂಡಾ ಯಾವುದೇ ಸಮಸ್ಯೆ ಇಲ್ಲದೆ ಪೂರ್ಣಗೊಳಿಸುವುದು ನಮ್ಮ ಯೋಜನೆಯಾಗಿದೆ’ ಎಂದು ಪ್ರಶಾಂತ್ ತಿಳಿಸಿದ್ದಾರೆ.
ಸೆ. 20ರಂದು ಆಯೋಜನೆಗೊಂಡಿರುವ ಅಯ್ಯಪ್ಪ ಸ್ವಾಮಿ ಸಂಗಮಮ್‌ಗೆ ರಾಜ ಮನೆತನವನ್ನು ಆಹ್ವಾನಿಸಲು ಪಂದಲಮ್‌ಗೆ ಪ್ರಶಾಂತ್ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮುಟ್ಟಿನ ವಯಸ್ಸಿನ ಮಹಿಳೆಯರ ಪ್ರವೇಶ ನಿರ್ಬಂಧಿಸುವುದು ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ 2018ರಲ್ಲಿ ಈ ನಿಷೇಧವನ್ನು ತೆರವುಗೊಳಿಸಿತ್ತು. ಈ ವಯೋಮಾನದ ಇಬ್ಬರು ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಸಿಪಿಐಎಂ ಮತ್ತು ಎಲ್‌ಡಿಎಫ್ ಸರ್ಕಾರದ ವಿರುದ್ಧ ಅಯ್ಯಪ್ಪ ಭಕ್ತರು, ಕಾಂಗ್ರೆಸ್ ಮತ್ತು ಸಂಘ ಪರಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.