ADVERTISEMENT

ಹಿಂಸಾಚಾರಕ್ಕೆ ನಲುಗಿದ ಕಣ್ಣೂರು

ವರ್ಷದ ಬಳಿಕ ಜಿಲ್ಲೆಯಲ್ಲಿ ಸಂಘರ್ಷ: ಹಲವೆಡೆ ಬಾಂಬ್‌ ದಾಳಿ, ಹಲ್ಲೆ ಆರೋಪ, ಪ್ರತ್ಯಾರೋಪ

ಪಿಟಿಐ
Published 5 ಜನವರಿ 2019, 20:25 IST
Last Updated 5 ಜನವರಿ 2019, 20:25 IST
   

ಕಣ್ಣೂರು/ತಿರುವನಂತಪುರ: ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ಕಣ್ಣೂರು ಜಿಲ್ಲೆ ಮತ್ತೆ ಭಾರಿಸಂಘರ್ಷಕ್ಕೆ ಸಾಕ್ಷಿಯಾಗಿದೆ. ಬಿಜೆಪಿ–ಆರ್‌ಎಸ್‌ಎಸ್‌ ಕಾರ್ಯಕರ್ತರ ನಡುವಣ ಸಂಘರ್ಷ ಶನಿವಾರವೂ ಮುಂದುವರಿದಿದೆ. ಪ್ರತಿಸ್ಪರ್ಧಿಗಳ ಮನೆಗಳು ಮತ್ತು ಅಂಗಡಿಗಳ ಮೇಲೆ ಎರಡೂ ಕಡೆಯವರು ದಾಳಿ ನಡೆಸಿದ್ದಾರೆ.

ಹಲವು ಸ್ಥಳಗಳಲ್ಲಿ ಬಾಂಬ್‌ ಎಸೆತ ಪ್ರಕರಣಗಳು ವರದಿಯಾಗಿವೆ. ಸಿಪಿಎಂ ಶಾಸಕ ಎ.ಎನ್‌. ಶಂಷೇರ್‌, ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ವಿ.ಮುರಳೀಧರನ್‌ ಮತ್ತು ಸಿಪಿಎಂನ ಕಣ್ಣೂರು ಜಿಲ್ಲೆಯ ಮಾಜಿ ಕಾರ್ಯದರ್ಶಿ ಪಿ. ಶಶಿ ಅವರ
ಮನೆಗಳ ಮೇಲೆ ಶುಕ್ರವಾರ ರಾತ್ರಿ ಬಾಂಬ್‌ ಎಸೆಯಲಾಗಿದೆ. ಈ ದುಷ್ಕೃತ್ಯದಲ್ಲಿ ಯಾರೂ ಗಾಯಗೊಂಡಿಲ್ಲ.

ಶಂಷೇರ್‌ ಮತ್ತು ಶಶಿ ಅವರ ಮನೆ ಮೇಲೆ ಬಾಂಬ್‌ ದಾಳಿಯಾದ ಕೆಲ ತಾಸುಗಳ ಬಳಿಕ ಮುರಳೀಧರನ್‌ ಅವರ ಮನೆ ಮೇಲೆ ದಾಳಿ ನಡೆಯಿತು. ಈ ಹೊತ್ತಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮುಖಂಡರು ಶಾಂತಿ ಸಭೆಯಲ್ಲಿ ಭಾಗವಹಿಸುತ್ತಿದ್ದರು.

ADVERTISEMENT

ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಅವಧಿಯ ವಿರಾಮದ ಬಳಿಕ ರಾಜಕೀಯ ಹಿಂಸಾಚಾರ ಆರಂಭವಾಗಿದೆ.

ಋತುಸ್ರಾವ ವಯೋಮಾನದ ಇಬ್ಬರು ಮಹಿಳೆಯರು ಶಬರಿಮಲೆ ದೇವಾಲಯಕ್ಕೆ ಬುಧವಾರ ರಾತ್ರಿ ಪ್ರವೇಶಿಸಿರುವುದನ್ನು ಖಂಡಿಸಿ ಕೇರಳದಾದ್ಯಂತ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಿದೆ. ಕೇರಳದ ಉಳಿದೆಡೆ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದ್ದರೂ ಕಣ್ಣೂರಿನಲ್ಲಿ ಮುಂದುವರಿದಿದೆ.

ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್‌ ಮುಖ್ಯಸ್ಥ ಲೋಕನಾಥ್‌ ಬೆಹರಾ ಸೂಚನೆ ಕೊಟ್ಟಿದ್ದಾರೆ. ಪಕ್ಷಗಳ ಮುಖಂಡರ ಮನೆಯ ಮೇಲೆ ದಾಳಿ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ಆದೇಶಿಸಿದ್ದಾರೆ.

ಕಣ್ಣೂರು ಜಿಲ್ಲೆಯಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿ ಈವರೆಗೆ 260 ಮಂದಿಯನ್ನು ಬಂಧಿಸಲಾಗಿದೆ.

ಪರಿಯಾರಂ ಎಂಬಲ್ಲಿ ಆರ್‌ಎಸ್‌ಎಸ್‌ ಕಚೇರಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಪೆರುಂಬಾರಾ ಎಂಬಲ್ಲಿ ಸಿಪಿಎಂ ಕಾರ್ಯಕರ್ತ ಮತ್ತು ತಲಶ್ಶೇರಿಯಲ್ಲಿ ಆರ್‌ಎಸ್‌ಎಸ್‌ ಮುಖಂಡ ಕೆ. ಚಂದ್ರಶೇಖರನ್‌ ಮೇಲೆ ಹಲ್ಲೆ ನಡೆಸಲಾಗಿದೆ. ಸಿಪಿಎಂ ಕಾರ್ಯಕರ್ತರು ಎಂದು ಹೇಳಲಾದ 25 ಮಂದಿಯ ಗುಂಪು ಚಂದ್ರಶೇಖರ್‌ ಅವರ ಮನೆಯ ಮೇಲೆಯೂ ದಾಳಿ ನಡೆಸಿದೆ.

ಹಿಂಸಾಚಾರಕ್ಕೆ ಸಂಬಂಧಿಸಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಮುಖಂಡರು ಪರಸ್ಪರರ ಮೇಲೆ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಗಲಭೆ ಎಬ್ಬಿಸಲು ಮತ್ತು ಶಾಂತಿ ಮಾತುಕತೆಯನ್ನು ಹಾಳುಗೆಡವಲು ಆರ್‌ಎಸ್‌ಎಸ್‌ ಯತ್ನಿಸುತ್ತಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಆರೋಪಿಸಿದ್ದಾರೆ. ಹಿಂಸಾಗ್ರಸ್ತ ಪ್ರದೇಶಗಳಲ್ಲಿ ಶಾಂತಿ ನೆಲೆಸುವಂತೆ ಮಾಡಲು ಆಡಳಿತ ಪಕ್ಷವು ಯತ್ನಿಸುತ್ತಿದೆ. ಆದರೆ, ಆರ್‌ಎಸ್‌ಎಸ್‌–ಬಿಜೆಪಿಯು ತಮ್ಮ ಅಧೀನದಲ್ಲಿರುವ ದೇವಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ‘ಶಸ್ತ್ರಾಗಾರ’ಗಳಾಗಿ ಪರಿವರ್ತಿಸಿದೆ ಎಂದು ಅವರು ಹೇಳಿದ್ದಾರೆ.

ಶಬರಿಮಲೆ ದೇವಾಲಯದಲ್ಲಿನ ಸಂಪ್ರದಾಯದ ಉಲ್ಲಂಘನೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಿಪಿಎಂ ಹಿಂಸಾಚಾರಕ್ಕೆ ಇಳಿದಿದೆ ಎಂದು ಮುರಳೀಧರನ್‌ ಹೇಳಿದ್ದಾರೆ.

ಬ್ರಿಟಿಷ್‌ ಪ್ರವಾಸಿಗಳಿಗೆ ಎಚ್ಚರಿಕೆ

ಕೇರಳಕ್ಕೆ ಪ್ರವಾಸ ಹೋಗಿರುವ ಅಥವಾ ಹೋಗಲು ಉದ್ದೇಶಿಸಿರುವ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು ಎಂದು ಬ್ರಿಟನ್‌ ಸರ್ಕಾರ ತನ್ನ ಪ್ರಜೆಗಳಿಗೆ ಎಚ್ಚರಿಕೆ ಕೊಟ್ಟಿದೆ. ಮಾಧ್ಯಮ ವರದಿಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು, ಹೆಚ್ಚು ಜನ ಸೇರಿರುವಲ್ಲಿಗೆ ಹೋಗಬಾರದು ಎಂದು ಹೇಳಿದೆ.

ಕಾನೂನು ಪಾಲಿಸಿ: ವಿಶ್ವಸಂಸ್ಥೆ

ವಿಶ್ವಸಂಸ್ಥೆ (ಪಿಟಿಐ): ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶ ನೀಡಬಹುದು ಎಂದು ಭಾರತದ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಎಲ್ಲರೂ ಕಾನೂನಿಗೆ ಗೌರವ ಕೊಡುವುದನ್ನು ವಿಶ್ವಸಂಸ್ಥೆ ಪ್ರೋತ್ಸಾಹಿಸುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ಅವರ ವಕ್ತಾರ ಹೇಳಿದ್ದಾರೆ.

‘ಇದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ವಿಚಾರ. ಹಾಗಾಗಿ ಈ ವಿಚಾರದಲ್ಲಿ ವಿಶ್ವಸಂಸ್ಥೆಗೆ ಭಿನ್ನವಾದ ಅಭಿಪ್ರಾಯ ಇಲ್ಲ. ಎಲ್ಲರೂ ಕಾನೂನನ್ನು ಗೌರವಿಸಬೇಕು. ಎಲ್ಲ ಜನರಿಗೂ ಸಮಾನ ಹಕ್ಕುಗಳಿವೆ ಎಂಬುದು ವಿಶ್ವಸಂಸ್ಥೆಯ ಮೂಲಭೂತ ನಿಲುವು’ ಎಂದು ಅವರು ಹೇಳಿದ್ದಾರೆ.‌

‘ಎಡಬಿಡಂಗಿ ಎಡಪಂಥೀಯರಿಗೆ ಧಾರ್ಮಿಕ ಸೂಕ್ಷ್ಮ ಅರ್ಥವಾಗದು’

ಮೈಸೂರು: ‘ಶಬರಿಮಲೆ ವಿಚಾರದಲ್ಲಿ ಅನವಶ್ಯಕವಾಗಿ ಮೂಗು ತೂರಿಸುತ್ತಿರುವ ಎಡಬಿಡಂಗಿ ಎಡಪಂಥೀಯರು ಹಾಗೂ ನಾಸ್ತಿಕರಿಗೆ ಧಾರ್ಮಿಕ ಸೂಕ್ಷ್ಮಗಳು ಅರ್ಥವಾಗುವುದಿಲ್ಲ’ ಎಂದು ಸಂಸದ ಪ್ರತಾಪ ಸಿಂಹ ಇಲ್ಲಿ ಶನಿವಾರ ಕುಟುಕಿದರು.

‘ಹಿಂದೂ ಧರ್ಮವು ನಂಬಿಕೆಗಳ ಆಧಾರದ ಮೇಲೆ ರೂಪಿತಗೊಂಡಿದೆ. ಅಯ್ಯಪ್ಪನು ಕಟ್ಟಾ ಬ್ರಹ್ಮಚಾರಿಯಾಗಿದ್ದ ಕಾರಣ 10ರಿಂದ 50 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಪ್ರವೇಶಿಸುವಂತಿಲ್ಲ ಎಂಬ ಆಚರಣೆ ಜಾರಿಯಲ್ಲಿದೆ. ಇದನ್ನು ಪ್ರಶ್ನಿಸಿ ಏನು ಪ್ರಯೋಜನ. ಅಲ್ಲದೇ, ಮುಟ್ಟನ್ನು ಹಿಂದೂಧರ್ಮದಲ್ಲಿ ಕೀಳೆಂದು ಪರಿಗಣಿಸಿಯೇ ಇಲ್ಲ. ಕಾಮಾಕ್ಯ ದೇವಸ್ಥಾನದಲ್ಲಿ ಮುಟ್ಟನ್ನು ಪೂಜಿಸುತ್ತಾರೆ. ಇದು ಎಡಪಂಥೀಯರ ಗಮನಕ್ಕೆ ಬರುವುದಿಲ್ಲವೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.