ADVERTISEMENT

ಜಾಗತಿಕ ಸ್ಮಾರಕವಾಗಿ ಸಾಬರಮತಿ

ಗಾಂಧೀಜಿ ಆಶ್ರಮವನ್ನು ಮೂಲ ಸ್ವರೂಪಕ್ಕೆ ಮರಳಿಸಲು ಪ್ರಧಾನಿ ಮೋದಿ ಚಿಂತನೆ: ಗಾಂಧಿ ಜಯಂತಿಯಂದು ಯೋಜನೆ ಪ್ರಕಟ?

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:00 IST
Last Updated 30 ಸೆಪ್ಟೆಂಬರ್ 2019, 20:00 IST
   

ಅಹಮದಾಬಾದ್‌: ಸಾಬರಮತಿ ಆಶ್ರಮದ ಚಿತ್ರಣವನ್ನೇ ಬದಲಾಯಿಸಿ ಅದನ್ನೊಂದು ‘ಜಾಗತಿಕ ಗಾಂಧಿ ಸ್ಮಾರಕ’ ಮಾಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಮಹಾತ್ಮ ಗಾಂಧಿ ಪರಂಪರೆಯ ಮೇಲೆ ಇದು ಮೋದಿ ಅವರ ಮುದ್ರೆ ಒತ್ತಲಿದೆ ಎಂದು ಹೇಳಲಾಗುತ್ತಿದೆ.

ಸಾಬರಮತಿ ಆಶ್ರಮವು ಗಾಂಧೀಜಿಯವರ ವೈರಾಗ್ಯ ಮತ್ತು ಸರಳ ಜೀವನದ ಪ್ರತಿಬಿಂಬ. ಆದರೆ, ಆಶ್ರಮದ ಚಹರೆಯೇ ಬದಲಾದರೆ ಅಲ್ಲಿಗೆ ಭೇಟಿ ನೀಡುವ ಜನರೂ ಬದಲಾಗಬಹುದು ಎನ್ನಲಾಗಿದೆ.

1930ರಿಂದಲೇ ಈ ಆಶ್ರಮ ಇದೆ. ಸುಮಾರು 30 ಎಕರೆ ಪ್ರದೇಶದಲ್ಲಿ ಇಲ್ಲಿ 61 ಕಟ್ಟಡಗಳಿವೆ. ಈ ಎಲ್ಲ ಕಟ್ಟಡಗಳನ್ನು ಜೋಡಿಸುವುದು ಕೇಂದ್ರ ಸರ್ಕಾರದ ಚಿಂತನೆ. ಈ ಪಾರಂಪರಿಕ ಕಟ್ಟಡಗಳನ್ನು ಐದು ಟ್ರಸ್ಟ್‌ಗಳು ನೋಡಿಕೊಳ್ಳುತ್ತಿವೆ.

ADVERTISEMENT

‘ಆಶ್ರಮವನ್ನು ಅದರ ಮೂಲರೂಪಕ್ಕೆ ತರುವುದು ಯೋಜನೆ. ಆಶ್ರಮವನ್ನು ವಿಭಜಿಸಿ ಮಧ್ಯೆ ಹಾದು ಹೋಗುವ ರಸ್ತೆಯನ್ನು ಮುಚ್ಚುವಂತಹ ಇತರ ಯೋಜನೆಗಳು ಇದರಲ್ಲಿ ಸೇರಿವೆ. ಇಡೀ ಪ್ರದೇಶವನ್ನು ‘ಮೌನ ವಲಯ’ ಆಗಿಸುವುದು ಮತ್ತು ಹೆಚ್ಚು ಪ್ರಶಾಂತವಾಗಿಸುವುದು ಇತರ ಅಂಶಗಳು’ ಎಂದು ಸಾಬರಮತಿ ಆಶ್ರಮದ ನಿರ್ವಹಣೆ ನೋಡಿಕೊಳ್ಳುತ್ತಿರುವ ಸಾಬರಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದ್ದಾರೆ.

‘ಇಂತಹ ಪ್ರಸ್ತಾವ ಪ್ರಧಾನಿ ಕಾರ್ಯಾಲಯದಲ್ಲಿ ಇದೆ ಎಂದು ತೋರುತ್ತಿದೆ. ಆದರೆ, ಇದಕ್ಕೆ ಸಂಬಂಧಿಸಿ ನಮಗೆ ಯಾವುದೇ ಮಾಹಿತಿ ಈವರೆಗೆ ಬಂದಿಲ್ಲ. ಆಶ್ರಮವನ್ನು ಇನ್ನಷ್ಟು ಪ್ರಶಾಂತವಾಗಿಸುವ ಯೋಜನೆ ಒಳ್ಳೆಯದ್ದೇ ಆಗಿದೆ. ಆದರೆ, ಭವ್ಯ ಅಥವಾ ಆಡಂಬರದ ಬದಲಾವಣೆಗಳನ್ನು ಮಾಡಿದರೆ ಆಶ್ರಮದ ಪಾವಿತ್ರ್ಯವೇ ಹಾಳಾಗಬಹುದು. ಈ ಸ್ಥಳವು ಸರಳ ಜೀವನದ ಪ್ರತೀಕ. ಹಾಗಾಗಿ ಇಲ್ಲಿನ ಪ್ರಶಾಂತ ವಾತಾವರಣವನ್ನು ಉಳಿಸಿಕೊಳ್ಳಲೇಬೇಕು’ ಎಂದು ಆಶ್ರಮದ ಮತ್ತೊಬ್ಬ ಟ್ರಸ್ಟಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಖಾದಿ ಗ್ರಾಮೋದ್ಯೋಗ ಆಯೋಗವು, ಗಾಂಧಿ ಆಶ್ರಮದ ಖಾದಿ ಗ್ರಾಮೋದ್ಯೋಗ ಪ್ರಯೋಗ ಸಮಿತಿಗೆ ಪತ್ರ ಬರೆದಿದೆ. ಜಮೀನನ್ನು ಗುಜರಾತ್‌ ಸರ್ಕಾರ ಅಥವಾ ಅಹಮದಾಬಾದ್‌ ನಗರಪಾಲಿಕೆಗೆ ಹಸ್ತಾಂತರಿಸುವಂತೆ ಪತ್ರದಲ್ಲಿ ಸೂಚಿಸಲಾಗಿದೆ. ಈ ಜಮೀನಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದೂ ಪತ್ರದಲ್ಲಿ ಹೇಳಲಾಗಿದೆ. ಆಯೋಗದ ಅಧ್ಯಕ್ಷ ವಿ.ಕೆ. ಸಕ್ಸೇನಾ ಅವರು ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆಶ್ರಮದ ಸ್ವರೂಪ ಬದಲಾಯಿಸುವ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ ಎಂದು ಆಶ್ರಮದ ಟ್ರಸ್ಟಿಗಳಲ್ಲಿ ಒಬ್ಬರಾದ ಕಾರ್ತಿಕೇಯ ಸಾರಾಭಾಯ್‌ ಹೇಳಿದ್ದಾರೆ. ಗಾಂಧೀಜಿಯ 150ನೇ ಜನ್ಮ ದಿನವಾದ ಅಕ್ಟೋಬರ್‌ 2ರಂದು ಇದು ಪ್ರಕಟವಾಗುವ ನಿರೀಕ್ಷೆ ಇದೆ. ಮೋದಿ ಅವರು ಅಂದು ಬೆಳಿಗ್ಗೆ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.

ಆಶ್ರಮವು ಆರಂಭದಲ್ಲಿ ಇದ್ದ ರೀತಿಯಲ್ಲಿ ಮರುರೂಪಿಸುವ ಮೂಲಕ ಇಲ್ಲಿಗೆ ಬರುವವರಲ್ಲಿ ಉಂಟಾಗುವ ಅನುಭೂತಿಯನ್ನು ಬೇರೊಂದು ಮಟ್ಟಕ್ಕೆ ಏರಿಸಲು ಮೋದಿ ಬಯಸಿದ್ದಾರೆ. ಈಗ, ಗಾಂಧಿ ಜೀವಿಸಿದ್ದ ಹೃದಯಕುಂಜ ಸೇರಿ ಕೆಲವು ಕಟ್ಟಡಗಳನ್ನು ನೋಡಲು ಮಾತ್ರ ಸಂದರ್ಶಕರಿಗೆ ಅವಕಾಶ ಇದೆ ಎಂದು ಕಾರ್ತಿಕೇಯ ಹೇಳಿದ್ದಾರೆ.

ಗಾಂಧಿ ಜತೆ ಬಂದವರ ಎತ್ತಂಗಡಿ

ಆಶ್ರಮದ ಸುತ್ತ ನೆಲೆಸಿರುವ 200 ಕುಟುಂಬಗಳಲ್ಲಿ ಪ್ರಸ್ತಾವಿತ ಯೋಜನೆಯು ಆಕ್ರೋಶ ಮೂಡಿಸಿದೆ. ಯೋಜನೆ ಅನುಷ್ಠಾನವಾದರೆ ಈ ಕುಟುಂಬಗಳು ಅಲ್ಲಿಂದ ಸ್ಥಳಾಂತರಗೊಳ್ಳುವುದು ಅನಿವಾರ್ಯ. ಈ ಎಲ್ಲ ಕುಟುಂಬಗಳ ಪೂರ್ವಜರು ಗಾಂಧಿಯ ಜತೆ ನೆಲೆಸುವುದಕ್ಕಾಗಿ ಸ್ವಾತಂತ್ರ್ಯಪೂರ್ವದಲ್ಲಿ ಇಲ್ಲಿಗೆ ಬಂದಿದ್ದರು.

ಅಹಮದಾಬಾದ್‌ ಮಹಾನಗರಪಾಲಿಕೆ ಮತ್ತು ಗುಜರಾತ್‌ ಸರ್ಕಾರ ಜತೆಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ ಎನ್ನಲಾಗಿದೆ. ಪ್ರಧಾನಿ ಕಾರ್ಯಾಲಯದ ಜತೆಗೆ ಸಮಾಲೋಚನೆ ನಡೆಸಿಯೇ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

**

ಸಂಬಂಧಪಟ್ಟ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಗುರಿಯನ್ನು ಸಾಧಿಸಿದರೆ ಉತ್ತಮ
- ಕಾರ್ತಿಕೇಯ ಸಾರಾಭಾಯ್‌, ಆಶ್ರಮದ ಟ್ರಸ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.