ADVERTISEMENT

ಮುಂಬೈ ವಿದ್ಯುತ್ ಗ್ರಿಡ್ ವೈಫಲ್ಯ: ದುಷ್ಕೃತ್ಯದ ಶಂಕೆ ವ್ಯಕ್ತಪಡಿಸಿದ ಇಂಧನ ಸಚಿವ

ಪಿಟಿಐ
Published 14 ಅಕ್ಟೋಬರ್ 2020, 9:11 IST
Last Updated 14 ಅಕ್ಟೋಬರ್ 2020, 9:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮುಂಬೈ ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎರಡು ದಿನಗಳ ಹಿಂದೆ ಸಂಭವಿಸಿವ ವಿದ್ಯುತ್ ಗ್ರಿಡ್ ವೈಫಲ್ಯದ ಹಿಂದೆ ದುಷ್ಕರ್ಮಿಗಳ ಕೈವಾಡವಿರುವ ಸಾಧ್ಯತೆಯಿರಬಹುದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರಾವುತ್ ಶಂಕಿಸಿದ್ದಾರೆ.

ಮುಂಬೈ, ಥಾಣೆ ಮತ್ತು ನವಿ ಮುಂಬೈಗಳಲ್ಲಿ ಸೋಮವಾರ ಉಂಟಾದ ವಿದ್ಯುತ್ ವೈಫಲ್ಯ ಸಣ್ಣ ವಿಚಾರವಲ್ಲ. ಇದು ಗಂಭೀರ ಸ್ವರೂಪದ್ದು ಎಂದು ಅಭಿಪ್ರಾಯಪಟ್ಟರು.

‘ನಮ್ಮ ತಂಡವು 400 ಕೆವಿ ಕಲ್ವಾ-ಪಾಡ್ಗ ಮಾರ್ಗದಲ್ಲಿ ಕೆಲಸ ಮಾಡುತ್ತಿತ್ತು. ಈ ಸಂದರ್ಭ ಸರ್ಕ್ಯುಟ್ 1ರಿಂದ 2ಕ್ಕೆ ಲೋಡ್‌ ವರ್ಗಾಯಿಸಲಾಯಿತು. ಆದರೆ ಇದೇ ಹೊತ್ತಿಗೆ ತಾಂತ್ರಿಕ ಸಮಸ್ಯೆಯಿಂದ ಖರಘಡದ ಘಟಕ ಸ್ಥಗಿತಗೊಂಡಿತು. ಮುಂಬೈನಲ್ಲಿ ಐಲ್ಯಾಂಡಿಂಗ್ ಸಂಭವಿಸಿ, ವಿದ್ಯುತ್ ಸರಬರಾಜು ವ್ಯತ್ಯಯವಾಯಿತು’ ಎಂದು ಘಟನಾವಳಿಗಳನ್ನು ವಿವರಿಸಿದರು.

ADVERTISEMENT

ಉತ್ಪಾದನೆ ಮತ್ತು ಸರಬರಾಜು ಮಾರ್ಗದ ಸಾಮರ್ಥ್ಯದಲ್ಲಿ ಉಂಟಾಗುವ ವ್ಯತ್ಯಯದಿಂದ ಉದ್ಘವಿಸುವ ಪರಿಸ್ಥಿತಿಯನ್ನು ಎಲೆಕ್ಟ್ರಿಕ್ ಪರಿಭಾಷೆಯಲ್ಲಿ ಐಲ್ಯಾಂಡಿಂಗ್ ಎನ್ನುತ್ತಾರೆ. ವಿದ್ಯುತ್ ಗ್ರಿಡ್‌ನಲ್ಲಿ ಪವರ್ ಇಲ್ಲದಿದ್ದರೂ ಡಿಜಿ (ಡಿಸ್ಟ್ರಿಬ್ಯೂಟೆಡ್ ಜನರೇಟರ್) ಒಂದು ನಿರ್ದಿಷ್ಟ ಪ್ರದೇಶಕ್ಕೆ ವಿದ್ಯುತ್ ಪ್ರವಹಿಸುವನ್ನು ಮುಂದುವರಿಸುತ್ತದೆ.

‘ಮುಂಬೈನಲ್ಲಿ ಐಲ್ಯಾಂಡಿಂಗ್‌ ಪರಿಸ್ಥಿತಿ ಉದ್ಭವಿಸಿತು ಎಂಬ ಕಾರಣಕ್ಕೇ ನನಗೆ ದುಷ್ಕೃತ್ಯದ ಶಂಕೆ ಬರುತ್ತಿದೆ’ ಎಂದು ರಾವುತ್ ವಿವರಿಸಿದರು.

ವಿದ್ಯುತ್ ವೈಫಲ್ಯದ ಬಗ್ಗೆ ಚರ್ಚಿಸಲೆಂದು ಕೇಂದ್ರದಿಂದಲೂ ತಜ್ಞರ ತಂಡವೊಂದು ಬಂದಿದೆ. ಒಂದು ವಾರದೊಳಗೆ ಕೇಂದ್ರ ತಂಡವು ತನ್ನ ವರದಿ ಸಲ್ಲಿಸಿದೆ. ರಾಜ್ಯ ಸರ್ಕಾರವೂ ವಿಚಾರಣಾ ಸಮಿತಿಯನ್ನು ರಚಿಸಿದೆ ಎಂದು ಹೇಳಿದರು.

2011ರಲ್ಲಿ ಸಂಭವಿಸಿದ್ದ ಇಂಥದ್ದೇ ಪ್ರಕರಣದ ಬಗ್ಗೆ ಸಿದ್ಧಪಡಿಸಿದ ತನಿಖಾ ವರದಿಯನ್ನೂ ಕೇಂದ್ರ ತಂಡದೊಂದಿಗೆ ಚರ್ಚಿಸುತ್ತೇವೆ. ಸಿಸ್ಟಂ ಆಡಿಟ್‌ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಿಡ್ ವೈಫಲ್ಯದಿಂದ ಮುಂಬೈ ಮತ್ತು ಉಪನಗರಗಳಲ್ಲಿ ಸೋಮವಾರ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರೈಲುಗಳು ಹಳಿಗಳ ಮೇಲೆಯೇ ನಿಂತುಬಿಟ್ಟಿದ್ದವು. ಜನರು ಮನೆಗಳನ್ನು ಸೇರಲು ಪರದಾಡುವಂತಾಯಿತು. ಮಾತ್ರವಲ್ಲ, ವರ್ಕ್‌ ಫ್ರಂ ಹೋಂ ಮೇಲೆಯೂ ಈ ವಿದ್ಯಮಾನ ಗಂಭೀರ ಪರಿಣಾಮ ಬೀರಿತ್ತು.

ತುರ್ತು ಸೇವೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಎರಡು ತಾಸು ಬೇಕಾಯಿತು. ಉಳಿದ ಪ್ರದೇಶಗಳಿಗೆ ಹಂತಹಂತವಾಗಿ ವಿದ್ಯುತ್ ವಿತರಣೆಯನ್ನು ಮತ್ತೆ ಆರಂಭಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.