ADVERTISEMENT

ಆರ್ಥಿಕ ಬಿಕ್ಕಟ್ಟು: ಕೇಂದ್ರದ ವಿರುದ್ಧದ ರಾಹುಲ್ ಗಾಂಧಿ ಹೇಳಿಕೆಗೆ ಪೈಲಟ್ ಬೆಂಬಲ

ಪಿಟಿಐ
Published 12 ಸೆಪ್ಟೆಂಬರ್ 2020, 11:29 IST
Last Updated 12 ಸೆಪ್ಟೆಂಬರ್ 2020, 11:29 IST
ರಾಹುಲ್ ಗಾಂಧಿ ಮತ್ತು ಸಚಿನ್ ಪೈಲಟ್
ರಾಹುಲ್ ಗಾಂಧಿ ಮತ್ತು ಸಚಿನ್ ಪೈಲಟ್   

ಜೈಪುರ: ಆರ್ಥಿಕ ಕುಸಿತಕ್ಕೆ ಸಂಬಂಧಿಸಿದಂತೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಗೆ ದನಿಗೂಡಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಕೈಗಾರಿಕೆಗಳು ಸ್ಥಗಿತಗೊಳ್ಳುತ್ತಿರುವುದರಿಂದ, ದೇಶದ ಆರ್ಥಿಕತೆಯು ಸ್ಥಿತಿಯು ಕಠೋರವಾಗಿದೆ ಮತ್ತು ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಪೈಲಟ್, ರಾಹುಲ್ ಗಾಂಧಿ ಅವರು ಎತ್ತಿರುವ ವಿಷಯಗಳು ಸಮರ್ಥನೀಯವಾಗಿವೆ. ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೈಗಾರಿಕೆಗಳು ಸ್ಥಗಿತಗೊಳ್ಳುತ್ತಿವೆ, 2.10 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಂಬಳ ಕಡಿತಗೊಳಿಸಲಾಗುತ್ತಿದೆ ಮತ್ತು ಮತ್ತೊಂದೆಡೆ, ಚೀನಾ ನಮ್ಮ ಪ್ರದೇಶವನ್ನು ಪ್ರವೇಶಿಸುತ್ತಿದೆ ಎಂದು ತಿಳಿಸಿದ್ದಾರೆ.

ಚೀನಾ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಇಡೀ ದೇಶ ಸರ್ಕಾರದೊಂದಿಗೆ ಇರುತ್ತದೆ. ಆದರೆ ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇತರ ವಿಷಯಗಳ ಬಗ್ಗೆ ಮಾತನಾಡಲಾಗುತ್ತಿದೆ. ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಆರೋಪಿಸಿದ್ದಾರೆ.

ಇದಕ್ಕೂ ಮೊದಲು ಸರಣಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಭಾರತ-ಚೀನಾ ಗಡಿಯಲ್ಲಿ ಚೀನಾದ ಆಕ್ರಮಣಶೀಲತೆ, ಉದ್ಯೋಗ ನಷ್ಟ, ನಿರುದ್ಯೋಗ, ಜಿಡಿಪಿ ಬೆಳವಣಿಗೆಯ ದರದಲ್ಲಿ ಕುಸಿತ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ದೂರಿದ್ದರು.

ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಮೋದಿ ಸರ್ಕಾರವು ಜನರ ಸಮಸ್ಯೆಗಳನ್ನು ಆಲಿಸಬೇಕು. ಮೋದಿ ಸರ್ಕಾರದ ನೀತಿಗಳಿಂದಾಗಿ ಜಿಡಿಪಿಯು ಐತಿಹಾಸಿಕ ಕುಸಿತ ಕಂಡಿದೆ. ಕೇಂದ್ರ ಸರ್ಕಾರವು ಭಾರತದ ಯುವ ಜನರ ಭವಿಷ್ಯವನ್ನು ಹತ್ತಿಕ್ಕಿದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.