ADVERTISEMENT

ಬಿಜೆಪಿ ಸೇರುವಂತೆ ₹35 ಕೋಟಿ ಆಮಿಷ ಒಡ್ಡಿದ್ದ ಪೈಲಟ್‌: ಕಾಂಗ್ರೆಸ್‌ ಶಾಸಕ ಆರೋಪ

ಏಜೆನ್ಸೀಸ್
Published 20 ಜುಲೈ 2020, 19:10 IST
Last Updated 20 ಜುಲೈ 2020, 19:10 IST
ಸಚಿನ್‌ ಪೈಲಟ್‌
ಸಚಿನ್‌ ಪೈಲಟ್‌    

ಜೈಪುರ:‘ಬಿಜೆಪಿ ಸೇರಿದರೆ ₹ 35 ಕೋಟಿ ನೀಡುವುದಾಗಿ ಸಚಿನ್ ಪೈಲಟ್‌ ಅವರು ನನಗೆ ಆಮಿಷ ಒಡ್ಡಿದ್ದರು’ ಎಂದು ರಾಜಸ್ಥಾನ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಲಿಂಗಾ ಆರೋಪಿಸಿದ್ದಾರೆ. ಈ ಆರೋಪವನ್ನು ಸಚಿನ್ ಪೈಲಟ್ ಅಲ್ಲಗಳೆದಿದ್ದಾರೆ.

ಸುದ್ದಿವಾಹಿನಿಗಳ ಜತೆ ಮಾತನಾಡುತ್ತಾ ಗಿರಿರಾಜ್ ಈ ಆರೋಪ ಮಾಡಿದ್ದಾರೆ. ‘ಡಿಸೆಂಬರ್‌ನಿಂದಲೇ ಇದು ನಡೆಯುತ್ತಿದೆ. ಸಚಿನ್ ಪೈಲಟ್‌ ಈ ಬಗ್ಗೆ ನನ್ನೊಂದಿಗೆ 2–3 ಬಾರಿ ಮಾತನಾಡಿದ್ದರು. ₹ 35 ಕೋಟಿ ನೀಡುವುದಾಗಿ ಆಮಿಷವನ್ನೂ ಒಡ್ಡಿದ್ದರು. ಆದರೆ ಅದನ್ನು ನಾನು ನಿರಾಕರಿಸಿದ್ದೆ’ ಎಂದು ಗಿರಿರಾಜ್ ಹೇಳಿದ್ದಾರೆ.

‘ಈ ಬಗ್ಗೆ ಡಿಸೆಂಬರ್‌ನಲ್ಲೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಮಾಹಿತಿ ನೀಡಿದ್ದೆ. ಸರ್ಕಾರವನ್ನು ಉರುಳಿಸಲು ಮತ್ತು ಪಕ್ಷವನ್ನು ಇಬ್ಭಾಗ ಮಾಡಲು ಸಂಚು ನಡೆಯುತ್ತಿದೆ ಎಂದು ಗೆಹ್ಲೋಟ್‌ ಅವರಿಗೆ ತಿಳಿಸಿದ್ದೆ. ಇದನ್ನೆಲ್ಲಾ ಸರಿಪಡಿಸುತ್ತೇವೆ ಎಂದು ಅವರು ಹೇಳಿದ್ದರು’ ಎಂದು ಗಿರಿರಾಜ್ ವಿವರಿಸಿದ್ದಾರೆ.

ADVERTISEMENT

ಬಿಎಸ್‌ಪಿಯಿಂದ ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾಗಿದ್ದ ಗಿರಿರಾಜ್ ಅವರು, ನಂತರದ ದಿನಗಳಲ್ಲಿ ಕಾಂಗ್ರೆಸ್‌ ಸೇರಿದ್ದರು.

ಗಿರಿರಾಜ್ ಅವರ ಆರೋಪದ ಬೆನ್ನಲ್ಲೇ ಸಚಿನ್ ಪೈಲಟ್ ವಿರುದ್ಧ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಟೀಕೆಗಳನ್ನು ಹರಿತಗೊಳಿಸಿದ್ದಾರೆ.‘ಬಿಜೆಪಿ ನೆರವನ್ನು ಪಡೆದು ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಸಂಚು ಬಹಳ ದಿನಗಳಿಂದ ನಡೆಯು
ತ್ತಿದೆ. ನಾನಿಲ್ಲಿ ತರಕಾರಿ ಮಾರಲು ಕುಳಿತಿಲ್ಲ, ನಾನು ಮುಖ್ಯಮಂತ್ರಿ’ ಎಂದು ಗೆಹ್ಲೋಟ್‌ ಕಿಡಿಕಾರಿದ್ದಾರೆ.

‘ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಈ ಆರೋಪ ಮಾಡಲಾಗಿದೆ. ಪಕ್ಷದ ಶಾಸಕನಾಗಿ, ಪಕ್ಷದ ನಾಯಕತ್ವದ ವಿರುದ್ಧ ನಾನು ಎತ್ತಿದ ಪ್ರಶ್ನೆಗಳನ್ನು ಹತ್ತಿಕ್ಕಲು ಹೀಗೆ ಮಾಡಲಾಗುತ್ತಿದೆ’ ಎಂದು ಸಚಿನ್ ಪೈಲಟ್‌ ಪ್ರತಿಕ್ರಿಯಿಸಿದ್ದಾರೆ.

ನರ್ಹತೆ ನೋಟಿಸ್: ಇಂದು ಆದೇಶ ಸಾಧ್ಯತೆ

ರಾಜಸ್ಥಾನ ವಿಧಾನಸಭಾ ಸ್ಪೀಕರ್‌ ನೀಡಿರುವ ನೋಟಿಸ್ ವಿರುದ್ಧ ಕಾಂಗ್ರೆಸ್‌ನ ಸಚಿನ್ ಪೈಲಟ್‌ ಸೇರಿ 19 ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಇಲ್ಲಿನ ಹೈಕೋರ್ಟ್‌ನಲ್ಲಿ ನಡೆಯಿತು. ಮಂಗಳವಾರವೂ ವಿಚಾರಣೆ ಮುಂದುವರಿಯಲಿದೆ.

ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ನೇತೃತ್ವದ ಪೀಠವು ಅರ್ಜಿಯ ವಿಚಾರಣೆ ನಡೆಸುತ್ತಿದೆ. ಸ್ಪೀಕರ್‌ ಸಿ.ಪಿ.ಜೋಶಿ ಪರವಾಗಿ ಕಾಂಗ್ರೆಸ್‌ ಮುಖಂಡ ಮತ್ತು ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ‘ಈ ವಿಚಾರದಲ್ಲಿ ಸ್ವೀಕರ್ ಅವರು ನಿರ್ಧಾರ ತೆಗೆದುಕೊಳ್ಳುವ ಮುನ್ನವೇ, ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲು ಹೇಗೆ ಸಾಧ್ಯ’ ಎಂದು ಸಿಂಘ್ವಿ ಪ್ರಶ್ನಿಸಿದರು.

ಬೆಂಬಲ ನೀಡುವ ಬಗ್ಗೆ ನಿರ್ಧಾರ: ‘ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತಿನ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಬೆಂಬಲಿಸಬೇಕೇ ಬೇಡವೇ ಎಂಬುದನ್ನು ಅಲ್ಲಿಯೇ ನಿರ್ಧರಿಸುತ್ತೇವೆ’ ಎಂದು ರಾಜಸ್ಥಾನ ಸಿಪಿಎಂ ಹೇಳಿದೆ.

***

ಆರು ತಿಂಗಳಿಂದ ಇಂತಹ ಸಂಚು ನಡೆಯುತ್ತಿದೆ. ಇಂತಹ ಮುಗ್ಧ ಮುಖದವರು (ಪೈಲಟ್‌) ಹೀಗೆ ಮಾಡುತ್ತಾರೆ ಎಂದರೆ, ಯಾರೂ ನಂಬುತ್ತಿರಲಿಲ್ಲ

– ಅಶೋಕ್ ಗೆಹ್ಲೋಟ್‌, ರಾಜಸ್ಥಾನ ಮುಖ್ಯಮಂತ್ರಿ

ಇಂತಹ ಸುಳ್ಳು ಆರೋಪಗಳಿಂದ ಬೇಸರವಾಗಿದೆ. ಆದರೆ ಇದು ಅನಿರೀಕ್ಷಿತವಲ್ಲ. ಸುಳ್ಳು ಆರೋಪ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ

– ಸಚಿನ್ ಪೈಲಟ್, ರಾಜಸ್ಥಾನ ಕಾಂಗ್ರೆಸ್ ಬಂಡಾಯ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.