ADVERTISEMENT

ಸಾದಿಕ್‌ ಜಮಾಲ್‌ ಹತ್ಯೆ ಪ್ರಕರಣ: ಸಹೋದರನಿಂದ ಗುಜರಾತ್‌ ಹೈಕೋರ್ಟ್‌ಗೆ ಮೊರೆ

ಪಿಟಿಐ
Published 7 ಜುಲೈ 2021, 10:41 IST
Last Updated 7 ಜುಲೈ 2021, 10:41 IST
.
.   

ಅಹಮದಾಬಾದ್‌: ಗುಜರಾತ್‌ನ ಭಾವನಗರ ನಿವಾಸಿ ಸಾದಿಕ್‌ ಜಮಾಲ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ನಾಲ್ವರು ಪೊಲೀಸ್‌ ಸಿಬ್ಬಂದಿಯನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಅವರ ಸಹೋದರ ಗುಜರಾತ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

2003ರಲ್ಲಿ ಅಹಮದಾಬಾದ್‌ ನಗರದಲ್ಲಿ ನಡೆದಿದೆ ಎನ್ನಲಾದ ನಕಲಿ ಎನ್‌ಕೌಂಟರ್‌ನಲ್ಲಿ ಸಾದಿಕ್‌ ಜಮಾಲ್‌ ಹತ್ಯೆಗೀಡಾಗಿದ್ದರು.

ವಿಶೇಷ ಸಿಬಿಐ ನ್ಯಾಯಾಲಯವು, ನಿವೃತ್ತ ಡಿವೈಎಸ್ಪಿ ತರುಣ್‌ ಬರೋಟ್‌ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಛತ್ರಸಿಂಹ ಚುಡಾಸಮಾ, ಆರ್‌.ಎಲ್‌ ಮವಾನಿ ಮತ್ತು ಎ.ಎಸ್‌. ಯಾದವ್‌ ಅವರನ್ನು ಈ ಪ್ರಕರಣದಿಂದ ಕೈಬಿಟ್ಟಿತ್ತು.

ADVERTISEMENT

ಈ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಿಸಲು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಸಾದಿಕ್‌ ಸಹೋದರ ಶಬ್ಬೀರ್‌ ಜಮಾಲ್‌ ಕಳೆದ ವಾರ, ಸಿಬಿಐ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ಸಾದಿಕ್‌ ಜಮಾಲ್‌ ಲಷ್ಕರ್‌–ಎ–ತಯಾಬ್‌ ಸಂಘಟನೆಯ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು, ಅಂದು ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹಾಗೂ ಇತರ ಬಿಜೆಪಿ ನಾಯಕರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿಕೆ ನೀಡಿದ್ದರು. 2003ರ ಜನವರಿ 13ರಂದು ಅಹಮದಾಬಾದ್‌ ನಗರದ ಹೊರವಲಯದ ನರೋಡಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾದಿಕ್‌ ಹತ್ಯೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.