ನವದೆಹಲಿ: ಸಹಾರ ಇಂಡಿಯಾ ಕಮರ್ಷಿಯಲ್ ಕಾರ್ಪೊರೇಷನ್ ಲಿಮಿಡೆಟ್ (ಎಸ್‌ಐಸಿಸಿಎಲ್) ಸಂಸ್ಥೆಯು ತನ್ನ ಆಸ್ತಿಗಳನ್ನು ಮಾರಾಟ ಮಾಡಲು ಅನುಮತಿ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಮಹಾರಾಷ್ಟ್ರದಲ್ಲಿರುವ ಆ್ಯಂಬಿ ವ್ಯಾಲಿ, ಲಖನೌನ ಸಹಾರ ಸಹೇರ್ ಸೇರಿದಂತೆ 88 ಆಸ್ತಿಯನ್ನು ಅದಾನಿ ಪ್ರಾಪರ್ಟೀಸ್ ಪ್ರೈ.ಲಿಮಿಟೆಡ್‌ಗೆ ಮಾರಾಟ ಮಾಡಲು ಸಂಸ್ಥೆ ಉದ್ದೇಶಿಸಿದೆ.
ವಕೀಲ ಗೌತಮ್ ಅವಸ್ಥಿ ಅವರ ಮೂಲಕ ಸಹಾರ ಸಂಸ್ಥೆಯು ಈ ಅರ್ಜಿ ಸಲ್ಲಿಸಿದ್ದು, ಅಕ್ಟೋಬರ್ 14ರಂದು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಸಹಾರ ಸಮೂಹಕ್ಕೆ ಸೇರಿದ ಆಸ್ತಿಯ ಮಾರಾಟಕ್ಕೆ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅನುಮತಿ ನೀಡದ ಕಾರಣ ನ್ಯಾಯಾಲಯದ ಆದೇಶದ ಮೂಲಕವೇ ಆಸ್ತಿ ಮಾರಾಟಕ್ಕೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಸಹಾರದ ಪ್ರಮುಖ ಆಸ್ತಿಯನ್ನು ಗರಿಷ್ಠ ಮೌಲ್ಯದಲ್ಲಿ ಮಾರಾಟ ಮಾಡಿ, ಈ ಮೂಲಕ ಸಂಸ್ಥೆ ಪೂರೈಸಬೇಕಾದ ಹಣಕಾಸಿನ ಬಾಧ್ಯತೆಗಳನ್ನು ನಿರ್ವಹಿಸಲು ಸಂಸ್ಥೆ ನಿರ್ಧರಿಸಿದೆ.
ಸಹಾರ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಅವರ ನಿಧನದ ಬಳಿಕ ಹೂಡಿಕೆದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಮನವಿ ಮಾಡಲಾಗುತ್ತಿದೆ ಎಂದೂ ಅರ್ಜಿಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.